ಅನಧಿಕೃತ ಕಾರ್ಯಕ್ರಮ ವಿರುದ್ಧ ಕಠಿಣ ಕ್ರಮ
ಕ.ಪ್ರ.ವಾರ್ತೆ ಶಿವಮೊಗ ್ಗ ಮಾ.7
ನೀತಿ ಸಂಹಿತೆ ಜಾರಿಯಾದ ದಿನದಿಂದ ಫಲಿತಾಂಶ ಪ್ರಕಟಗೊಳ್ಳುವ ದಿನದವರೆಗೂ ನಡೆಯುವ ರಾಜಕೀಯ ಪಕ್ಷ ಹಾಗೂ ಸಂಬಂಧಿತ ಗುಂಪುಗಳ ಎಲ್ಲಾ ಚಟುವಟಿಕೆಗಳ ವೆಚ್ಚವೂ ಸಹ ಅಭ್ಯರ್ಥಿಯ ವೆಚ್ಚಕ್ಕೆ ಸೇರುತ್ತದೆ. ಇನ್ನೂ ಅಭ್ಯರ್ಥಿ ಘೋಷಣೆಯಾಗಿಲ್ಲ. ನಾಮಪತ್ರ ಸಲ್ಲಿಸಿಲ್ಲ ಎಂದುಕೊಂಡರೆ ಹೊರೆ ಬೀಳುವುದು ಗ್ಯಾರಂಟಿ.
ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ವಿಪುಲ್ ಬನ್ಸಲ್ ಈ ವಿಷಯ ತಿಳಿಸಿದರು.
ಅಭ್ಯರ್ಥಿ ಘೋಷಣೆಗೆ ಮುಂಚೆ ಪಕ್ಷದ ಜಿಲ್ಲಾಧ್ಯಕ್ಷರು ಕಾರ್ಯಕ್ರಮ ನಡೆಸುವ ಬಗ್ಗೆ ಅನುಮತಿ ಪಡೆಯಬೇಕು. ಈ ವೆಚ್ಚವನ್ನು ನಂತರ ಅಭ್ಯರ್ಥಿ ಲೆಕ್ಕಕ್ಕೆ ಸೇರಿಸಲಾಗುವುದು. ಯಾವುದಾದರೂ ಗುಂಪು, ಅಭಿಮಾನಿಗಳ ವೇದಿಕೆಗಳು ಅನಧಿಕೃತವಾಗಿ ಕಾರ್ಯಕ್ರಮ ಆಯೋಜಿಸಿದರೆ ಅವರ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆ ಪ್ರಕಾರ ಅವರು ಶಿಕ್ಷೆಗೆ ಅರ್ಹರಾಗುತ್ತಾರೆ ಎಂದರು.
ಅಭ್ಯರ್ಥಿಗಳ ವೆಚ್ಚ ನಿರ್ವಹಣೆ ಪರಿಶೀಲನೆ ನೋಡಲ್ ಅಧಿಕಾರಿ ಸಿಇಓ ಸಸಿಕಾಂತ್ ಸೆಂಥಿಲ್, ಒಬ್ಬ ಅಭ್ಯರ್ಥಿಯು ಗರಿಷ್ಠ 70 ಲಕ್ಷ ವೆಚ್ಚ ಮಾಡಬಹುದು. ಚುನಾವಣೆಗಾಗಿಯೇ ಅವರು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ಈ ಮೂಲಕವೇ ವ್ಯವಹಾರ ಮಾಡಬೇಕು. 20000 ಕ್ಕಿಂತ ಹೆಚ್ಚು ಮೊತ್ತದ ಪಾವತಿಯನ್ನು ಕ್ರಾಸ್ ಮಾಡಿದ ಚೆಕ್ ಮೂಲಕವೇ ಮಾಡಬೇಕು. 70 ಲಕ್ಷಕ್ಕಿಂತ ಹೆಚ್ಚು ವೆಚ್ಚ ಮಾಡಿದರೆ, ತಪ್ಪು ಲೆಕ್ಕ ಕೊಟ್ಟರೆಅವರು ಅನರ್ಹರಾಗುತ್ತಾರೆ ಎಂದು ಎಚ್ಚರಿಸಿದರು.
ಒಬ್ಬ ಅಭ್ಯರ್ಥಿ ಎಷ್ಟು ವಾಹನ ಬೇಕಾದರೂ ಬಳಸಬಹುದು, ಎಷ್ಟು ಫ್ಲೆಕ್ಸ್-ಬ್ಯಾನರ್‌ಗಳನ್ನು ಬೇಕಾದರೂ ಹಾಕಬಹುದು. ಆದರೆ ವೆಚ್ಚ ಮಾತ್ರ 70 ಲಕ್ಷ ದಾಟಬಾರದು ಎಂದರು.
ಭದ್ರತೆ ಹೇಗೆ: ಚುನಾವಣೆಗೆ ನಿಂತಿರುವ ಎಲ್ಲಾ ಅಭ್ಯರ್ಥಿಗಳ ಸುರಕ್ಷತೆ ನಮ್ಮ ಹೊಣೆ. ಯಾವ ಅಭ್ಯರ್ಥಿಗೆ ಎಷ್ಟು ಭದ್ರತೆ ಕೊಡಬೇಕು. ಗನ್ ಮ್ಯಾನ್ ಸಾಕೇ, ಪೈಲಟ್-ಎಸ್ಕಾರ್ಟ್ ಕೊಡಬೇಕೇ, ಒಂದು ವಾಹನ ಸಾಕೇ ಎಂಬುದನ್ನು ಜಿಲ್ಲಾ ಪೊಲೀಸ್ ವರಿಷ್ಠರು ಆದ್ಯತೆ ಮೇಲೆ ನಿರ್ಧರಿಸುತ್ತಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಚಿವರು ತಮ್ಮ ಮನೆ-ಕಚೇರಿ ನಡುವೆ ಓಡಾಡುವುದಕ್ಕೆ ಮಾತ್ರ ಸರ್ಕಾರಿ ವಾಹನ ಬಳಸಬಹುದು. ಇದು ಬೆಂಗಳೂರಿನಲ್ಲಿ ಮಾತ್ರ ಸಾಧ್ಯ. ವಿಧಾನಸಭಾಧ್ಯಕ್ಷರು, ವಿಧಾನಪರಿಷತ್ ಸಭಾಪತಿಗಳು ಸರ್ಕಾರಿ ವಾಹನವನ್ನು ಜಿಲ್ಲೆಯಲ್ಲಿರುವ ತಮ್ಮ ಮನೆಯಿಂದ ಬೆಂಗಳೂರಿನ ಕಚೇರಿಗೆ ಹೋಗುವುದಕ್ಕೆ ಮಾತ್ರ ವಾಹನ ಬಳಸಬಹುದು ಎಂದು ಅವರು ಸ್ಪಷ್ಟನೆ ನೀಡಿದರು.
ಚುನಾವಣೆ ಸಂದರ್ಭ ಪಡಿತರ ಚೀಟಿ ಹಂಚಿಕೆ, ಸ್ವಾಸ್ಥ ಬಿಮಾ ಯೋಜನೆ, ಯಶಸ್ವಿನಿ ಯೋಜನೆ ಇತ್ಯಾದಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದರು.
ಚುನಾವಣಾ ವೇಳಾಪಟ್ಟಿ
ವೇಳಾಪಟ್ಟಿ ಹೊರಡಿಸುವ ದಿನಾಂಕ................................... ಮಾ.19
ನಾಮಪತ್ರ ಸಲ್ಲಿಸಲು ಕೊನೆ ದಿನ ....................................... ಮಾ.26
ನಾಮಪತ್ರ ಪರಿಶೀಲನೆ ................................................... ಮಾ.27
ನಾಮಪತ್ರ ವಾಪಸ್ ಪಡೆಯುವ ಕೊನೆ ದಿನ...................... ಮಾ.29
ಮತದಾನ ದಿನಾಂಕ ........................................................... ಏ.17
ಮತ ಎಣಿಕೆ................................................................... ಮೇ 16
ಚುನಾವಣಾ ಪ್ರಕ್ರಿಯೆ ಮುಕ್ತಾಯ ದಿನ ................................ಮೇ 28
ಹೆಸರು ಪರಿಶೀಲಿಸಿಕೊಳ್ಳಿ
ಮತದಾರರು ಮತಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಆಯೋಗವು ಅವಕಾಶ ಒದಗಿಸಿದೆ. ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಇದೇ ಮಾ.9 ರಂದು ವಿಶೇಷ ಆಂದೋಲನವು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯುವುದು.
ಮತದಾರರು ಅಂದು ಮತಗಟ್ಟೆಗೆ ತೆರಳು ತಮ್ಮ ಹೆಸರು ಮತಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬಹುದು. ಇಲ್ಲದಿದ್ದರೆ ಅಲ್ಲಿಯೇ ಅರ್ಜಿ ಸಲ್ಲಿಸಬಹುದು. ಈ ರೀತಿ ಹೆಸರು ಸೇರ್ಪಡೆ, ತಿದ್ದುಪಡಿ, ತೆಗೆಯುವುದಕ್ಕೆ ಅರ್ಜಿ ಸಲ್ಲಿಸಲು ಮಾ.16 ರವರೆಗೆ ಅವಕಾಶವಿದೆ.