ಮಳಿಗೆ ಹರಾಜು ನಿಯಮಬಾಹಿರ: ಆರೋಪ
ಕನ್ನಡಪ್ರಭ ವಾರ್ತೆ ಟಿ ಸಾಗರ ಟಿ ಮಾ.7
ತಾಲೂಕಿನ ತಾಳಗುಪ್ಪ ಗ್ರಾಮ ಪಂಚಾಯಿತಿಯಲ್ಲಿ ಕೋಳಿ ಮಾಂಸ ಮಾರಾಟ ಮಳಿಗೆಯನ್ನು ಅನಧಿಕೃತವಾಗಿ ಹರಾಜು ಹಾಕಿರುವುದನ್ನು ಖಂಡಿಸಿ ಜನಪರ ಹೋರಾಟ ವೇದಿಕೆ ವತಿಯಿಂದ ಶುಕ್ರವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಕೆ.ಎಲ್. ಭೋಜರಾಜ್ ಮಾತನಾಡಿ, ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫೆ. 24ರಂದು ನಾಲ್ಕು ಕೋಳಿ ಮಾಂಸ ಮಾರಾಟ ಮಳಿಗೆಯ ಹರಾಜನ್ನು ತೀವ್ರ ವಿರೋಧದ ನಡುವೆಯೂ ನಡೆಸಲಾಗಿದೆ. ಹರಾಜು ಪಡೆದವರು ಯಾವುದೆ ಮಳಿಗೆ ಹೊಂದಿಲ್ಲ. ಹರಾಜು ನಿಯಮಾವಳಿಯಲ್ಲಿ ಸ್ವಂತ ಮಳಿಗೆ ಹೊಂದಿರಬೇಕು ಎಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಲಾಗಿದೆ. ಈ ಬಗ್ಗೆ ಪಂಚಾಯಿತಿ ಆಡಳಿತ ಹಾರಿಕೆಯ ಉತ್ತರ ನೀಡುತ್ತಿದೆ ಎಂದು ದೂರಿದರು.
ಈಗಾಗಲೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೋಳಿ ಮಾಂಸ ಮಾರಾಟ ಮಳಿಗೆ ಮಾಲೀಕರ ಲೈಸೆನ್ಸ್ ಅವಧಿ ಮಾ. 31ಕ್ಕೆ ಕೊನೆಗೊಳ್ಳುತ್ತದೆ. ಅವಧಿಗಿಂತ ಮೊದಲೆ ಹರಾಜು ಪ್ರಕ್ರಿಯೆ ನಡೆದಿರುವುದರಿಂದ ಹಿಂದಿನಿಂದಲೂ ಇದೇ ವ್ಯಾಪಾರ ಮಾಡಿಕೊಂಡು ಬಂದ ಅಂಗಡಿ ಮಾಲೀಕರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಹರಾಜಿನ ಹಿಂದೆ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಅವ್ಯವಹಾರ ನಡೆಸಿರುವ ಶಂಕೆ ಇದ್ದು, ತಕ್ಷಣ ಉಪವಿಭಾಗಾಧಿಕಾರಿಗಳು ಫೆ. 24ರಂದು ನಡೆದ ಹರಾಜು ಪ್ರಕ್ರಿಯೆ ರದ್ದುಗೊಳಿಸಬೇಕು. ತರಾತುರಿ ಹರಾಜು ಮಾಡಿರುವ ಕುರಿತು ತನಿಖೆ ನಡೆಸಬೇಕು. ಇಲ್ಲವಾದಲ್ಲಿ ವೇದಿಕೆ ವತಿಯಿಂದ ಪಂಚಾಯಿತಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೆ.ಮಂಜುನಾಥ್, ಪ್ರವೀಣ ಬಣಕಾರ್, ಸಲೀಂ ಅಹ್ಮದ್, ಪ್ರಕಾಶ್ ಗೂರ್ಲಕೆರೆ, ನಾರಾಯಣ ಕೆ.ಸಿ., ದ್ಯಾವಪ್ಪ, ರವೀಂದ್ರ, ಲಲಿತಮ್ಮ, ರಾಜಶೇಖರ್, ಮನೋಹರ ಹಾಜರಿದ್ದರು.