ವ್ಯಾಜ್ಯಪೂರ್ವ ಅದಾಲತ್ನಿಂದ ಕಕ್ಷಿದಾರರಿಗೆ ಲಾಭ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮಾ.7
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ವಕೀಲರ ಸಂಘ, ವಾರ್ತಾ ಇಲಾಖೆ, ಸ್ಟೇಟ್ ಬ್ಯಾಂಕ್ ಇಂಡಿಯಾ ಸಹಯೋಗದಲ್ಲಿ ಹಮ್ಮಿಕೊಂಡಿರುವ ಜನತಾ ನ್ಯಾಯಾಲಯ ಶುಕ್ರವಾರ ಇಲ್ಲಿನ ಎಸ್ಬಿಐ ಪ್ರಧಾನ ಕಚೇರಿ ಮುಂಭಾಗದಲ್ಲಿ ಆರಂಭಗೊಂಡಿತು.
ಅದಾಲತ್ಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಶರಶ್ಚಂದ್ರ ಬ. ಅಂಗಡಿ, ಶಿವಮೊಗ್ಗದಲ್ಲೇ ಮೊದಲಾಗಿ ಹಮ್ಮಿಕೊಂಡ ವ್ಯಾಜ್ಯಪೂರ್ವ ಅದಾಲತ್ ರಾಜ್ಯದ ಗಮನ ಸೆಳೆದಿದೆ. ಇದೊಂದು ನ್ಯಾಯದಾನ ಪ್ರಕ್ರಿಯೆಯಲ್ಲಿ ವಿನೂತನ ಪ್ರಯೋಗವಾಗಿದೆ. ಉಚ್ಚನ್ಯಾಯಾಲಯದ ಸಹ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.
ಈ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕಕ್ಷಿಗಾರರಿಗೆ ವಿಶಿಷ್ಟ ಲಾಭಗಳಿವೆ. ಜನತಾ ನ್ಯಾಯಾಲಯವು ಜನಸ್ನೇಹಿಯಾಗಿದೆ. ಪ್ರಕರಣಗಳು ಸೌಹಾರ್ದಯುತವಾಗಿ ಇತ್ಯರ್ಥಗೊಳ್ಳುವುದರಿಂದ ಬಾಂಧವ್ಯ ಉಳಿಯುವುದು. ಸುಸ್ತಿದಾರನು ಬಡ್ಡಿಯಲ್ಲಿ ಸೂಕ್ತ ರಿಯಾಯಿತಿ ಪಡೆದು ಸಾಲ ಹೊರೆಯಿಂದ ಋಣಮುಕ್ತರಾಗಲು ಇದೊಂದು ಸದವಕಾಶ ಎಂದು ಅಭಿಪ್ರಾಯಪಟ್ಟರು.
ವಕೀಲರ ಸಂಘದ ಸಹಕಾರ ಶ್ಲಾಘನೀಯ. ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆದ ಮೊದಲ ಮೇಘಾ ಲೋಕ್ ಅದಾಲತ್ನಲ್ಲಿ ಸುಮಾರು 15 ಕೋಟಿ ಮೊತ್ತಕ್ಕೆ ಸಂಬಂಧಪ್ಟ 1647 ವ್ಯಾಜ್ಯ ಪೂರ್ವ ಸಾಲದ ಪ್ರಕರಣಗಳು ಇತ್ಯರ್ಥಗೊಂಡವು. 5 ಕೋಟಿಯಷ್ಟು ನಗದು ಪಾವತಿಯಾಗಿದೆ. ಇದೊಂದು ಐತಿಹಾಸಿಕ ದಾಖಲೆಯಾಗಿದೆ. ಎಸ್ಬಿಐನಲ್ಲಿ ನಡೆಯುತ್ತಿರುವ ಈ ಅದಾಲತ್ ಕೂಡ ಯಶಸ್ಸು ಗಳಿಸಲಿ, ಸುಸ್ತಿದಾರರೂ ಇದರ ಉಪಯೋಗಪಡೆದುಕೊಳ್ಳಲಿ ಎಂದರು.
ಮೊದಲೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಎಂ. ನಂಜುಂಡಸ್ವಾಮಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಆರ್ಥಿಕ ಪರಿಸ್ಥಿತಿ ನಾಡಿಮಿಡಿತವಿದ್ದಂತೆ. ಈ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕೆಂದರೆ ಬ್ಯಾಂಕುಗಳ ವ್ಯವಹಾರ ಉತ್ತಮವಾಗಿ ನಡೆಯಬೇಕು. ಈ ಹಿನ್ನೆಲೆ ಸಾಲ ಪಡೆದುಕೊಂಡವರು ಸುಸ್ತಿದಾರರಾಗದೇ ಸಾಲ ಮರುಪಾವತಿ ಮಾಡಬೇಕೆಂದು ಸಲಹೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಅಶೋಕ್ ಜಿ. ಭಟ್, ಎಸ್ಬಿಐ ಎಜಿಎಂ ವಿದ್ಯಾಶಂಕರ್, ವಾರ್ತಾಧಿಕಾರಿ ಹಿಮಂತರಾಜು ಜಿ.ಸಾಕ್ಷಿಹಳ್ಳಿ ಉಪಸ್ಥಿತರಿದ್ದರು. ನ್ಯಾಯಾಧೀಶರು, ಬ್ಯಾಂಕಿನ ಅಧಿಕಾರಿಗಳು, ಹಿರಿಯ ವಕೀಲರು ಹಾಜರಿದ್ದರು.