ಕಲಿಕಾ ಸ್ನೇಹಿ ವಾತಾವರಣ ಅಗತ್ಯ
ಕ.ಪ್ರ.ವಾರ್ತೆ ಶಿವಮೊಗ್ಗ ಮಾ.9 ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ ಹಮ್ಮಿಕೊಂಡ ಸ್ವಯಂ ಕಲಿಕಾ ಅಧ್ಯಯನ ಸಾಮಗ್ರಿ ಪುನರ್ ಮನನ ಕಾರ್ಯಾಗಾರವನ್ನು ನವದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕಿ ಪ್ರೊ. ಮಂಜುಳಿಕಾ ಶ್ರೀವಾಸ್ತವ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಎಸ್.ಎ. ಬಾರಿ ಮಾತನಾಡಿ, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಎಂಬುದು ವಿಶ್ವವಿದ್ಯಾಲಯದ ಧ್ಯೇಯ. ಕಲಿಯುವವರಿಗೆ ಯಾವುದೇ ಸಮಯ ಹಾಗೂ ವಯಸ್ಸಿನ ಅಂತರ ಎಂಬುದಿಲ್ಲ. ಈ ನಿಟ್ಟಿನಲ್ಲಿ ಸ್ವಯಂ ಕಲಿಕಾ ಅಧ್ಯಯನ ಸಾಮಗ್ರಿಯನ್ನು ಅಭಿವೃದ್ಧಿಪಡಿಸಬೇಕು ಆ ಮುಖೇನ ವಿದ್ಯಾರ್ಥಿಗಳಿಗೆ ಕಲಿಕಾ ಸ್ನೇಹಿ ವಾತಾವರಣವನ್ನು ನಿರ್ಮಿಸಬೇಕು ಎಂದರು.
ಉಪಗ್ರಹ ಆಧಾರಿತ ಶಿಕ್ಷಣ: ಕುವೆಂಪು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ನಿರ್ದೇಶನಾಲಯದಲ್ಲಿ ಸುಸ್ಥಿರವಾದ ಅಂತರ್ಜಾಲ ಮತ್ತು ಉಪಗ್ರಹ ಆಧಾರಿತ ದೂರ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ನವದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ದೂರಶಿಕ್ಷಣ ಪರಿಷತ್ ಮಾಜಿ ನಿರ್ದೇಶಕ ಡಾ. ಭರತ್ ಭೂಷಣ್, ದೂರ ಶಿಕ್ಷಣದ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಮಾತನಾಡುತ್ತಾ ಸ್ವಯಂ ಕಲಿಕಾ ಅಧ್ಯಯನ ಸಾಮಗ್ರಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ ವಿದ್ಯಾರ್ಥಿಗಳಿಗೆ ಅನೂಕೂಲವಾಗುವಂತೆ ಸ್ವಯಂ ಕಲಿಕಾ ಅಧ್ಯಯನ ಸಾಮಗಿಗಳನ್ನು ಒದಗಿಸಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪರೀಕ್ಷಾಂಗ ಕುಲಸಚಿವ ಪ್ರೊ. ಎಚ್.ಎಸ್. ಭೋಜಾನಾಯ್ಕ, ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ 11 ವರ್ಷಗಳನ್ನು ಪೂರೈಸಿದ್ದು, ನಿರ್ದೇಶನಾಲಯದ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಯ ಪ್ರವೇಶದಿಂದ ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರ ಪಡೆಯುವವರೆಗಿನ ಎಲ್ಲ ಪ್ರಕ್ರಿಯೆಯಲ್ಲಿ ಅಂತರ್ಜಾಲ ವ್ಯವಸ್ಥೆಯನ್ನು ಆಳವಡಿಸಿಕೊಳ್ಳಲಾಗಿದೆ. ಆ ಮೂಲಕ ದೂರಶಿಕ್ಷಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಾತಾವರಣವನ್ನು ನಿರ್ಮಿಸಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಹಣಕಾಸು ಅಧಿಕಾರಿ ಪ್ರೊ. ಆರ್. ಹಿರೇಮಣಿ ನಾಯ್ಕ, ದೂರ ಶಿಕ್ಷಣದ ಮೂಲಕ ಅಧ್ಯಯನ ಮಾಡುವವರಿಗೆ ಉತ್ತಮ ಕಲಿಕಾ ಸಾಮಗ್ರಿಗಳನ್ನು ರೂಪಿಸಿಕೊಡಬೇಕು, ಆ ಮುಖೇನ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಎಂ. ವೆಂಕಟೇಶ್ವರಲು, ದೂರ ಶಿಕ್ಷಣ ನಿರ್ದೇಶನಾಲಯ ಅಭಿವೃದ್ಧಿಪಡಿಸಿರುವ ಕಾರ್ಯಕ್ರಮಗಳು ಹಾಗೂ ಮಾಹಿತಿ ತಂತ್ರಜ್ಞಾನ ಯೋಜನೆಯನ್ನು ಅಳವಡಿಸುವ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕೋರ್ಸುಗಳ ಸಂಯೋಜಕರು, ಅಧ್ಯಕ್ಷರು ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಮಂಡಳಿ ಅಧ್ಯಕ್ಷರು ಉಪಸ್ಥಿತರಿದ್ದರು. ಡಾ. ಹಸೀನಾ, ಎಚ್.ಕೆ. ಪ್ರಾರ್ಥಿಸಿ ನಿರೂಪಿಸಿದರು. ದೂರಶಿಕ್ಷಣ ನಿರ್ದೇಶನಾಲಯದ ವಿಶೇಷಾಧಿಕಾರಿ ಪ್ರೊ. ಎ. ಮೋಹನ್ರಾಮ್ ವಂದಿಸಿದರು. ನಿಕಾಯದ ಸಲಹೆಗಾರ ಡಾ. ಜಿ.ಸಿ. ಸುರೇಶ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.
ಮಧ್ಯಾಹ್ನದ ಗೋಷ್ಠಿಯಲ್ಲಿ ದೂರಶಿಕ್ಷಣ ನಿರ್ದೇಶನಾಲಯದ ಸ್ವಯಂ ಕಲಿಕಾ ಅಧ್ಯಯನ ಸಾಮಗ್ರಿ ಶೈಕ್ಷಣಿಕ ವಿಷಯಗಳ ಕುರಿತಂತೆ ಚರ್ಚಿಸಲಾಯಿತು.