ಮಳೆಯಿಂದ ಮಾವಿಗೆ ಬೂದಿ, ಚಿಬ್ಬುರೋಗ
ಶಿವಮೊಗ್ಗ: ಜಿಲ್ಲೆಯಲ್ಲಿ ಸುಮಾರು ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯನ್ನು ಬೆಳೆಯಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಮಾವು ಬೆಳೆಯಲ್ಲಿ ಉತ್ತಮವಾದ ಹೂ ಗೊಂಚಲಗಳು ಬಂದಿರುವುದನ್ನು ಗಮನಿಸಲಾಗಿದೆ.
ಆದರೆ, ಜಿಲ್ಲೆಯ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳಲ್ಲಿ ಇತ್ತೀಚಿಗೆ ಮಳೆ ಬಂದಿದ್ದು, ಮಾವು ಬೆಳೆಗೆ ಬೂದಿ ರೋಗ, ಚಿಬ್ಬು ರೋಗ ಮತ್ತು ಜಿಗಿ ಹುಳುಗಳ ಭಾದೆ ಹೆಚ್ಚಾಗುವ ಸಂಭವವಿರುವುದರಿಂದ ಕಾಯಿ ಕಚ್ಚುವಿಕೆ ಕಡಿಮೆಯಾಗಿ ಮಿಡಿಗಾತ್ರದ ಕಾಯಿಗಳು ಉದುರುವ ಸಾಧ್ಯತೆಗಳು ಇರುತ್ತವೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಎಂ. ವಿಶ್ವನಾಥ್ ತಿಳಿಸಿದ್ದಾರೆ.
ನಿರ್ವಹಣೆ: ಪ್ರತಿ 200 ಲೀಟರ್ ನೀರಿಗೆ 600 ಗ್ರಾಂ. ನೀರಿನಲ್ಲಿ ಕರಗುವ ಗಂಧಕ ಅಥವಾ 200 ಗ್ರಾಂ. ಕಾರ್ಬನ್ ಡೈಜಿಂ ಅಥವಾ 400 ಮಿ.ಲೀ. ಹೆಕ್ಸಾಕೋನಜೋಲ್ ಜೊತೆಗೆ 100 ಮಿ.ಲೀ. ಲ್ಯಾಮ್ಡಾ ಸೈಲೋಥ್ರಿನ್ ಅಥವಾ 100 ಮಿ.ಲೀ. ಇಮಿಡಾಕ್ಲೋಪ್ರಿಡ್ ಅನ್ನು ಸೂಕ್ತ ಅಂಟಿನೊಂದಿಗೆ ಮಿಶ್ರಮಾಡಿ ಗೊಂಚಲುಗಳಿಗೆ ಸಿಂಪಡಿಸಬೇಕು. ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಮತ್ತು ತೋಟಗಾರಿಕೆ ಅಧಿಕಾರಿಗಳು ಅಥವಾ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಸ್ಯ ರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ನಾರಾಯಣ ಸ್ವಾಮಿ ಅವರನ್ನು ಸಂಪರ್ಕಿಸಲು ಕೋರಲಾಗಿದೆ.