ಸಮಬಲ ಹೋರಾಟದಲ್ಲಿ ಕುಸ್ತಿ ಪಂದ್ಯ ಅಂತ್ಯ
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.9 ಕಿಕ್ಕಿರಿದು ತುಂಬಿದ್ದ ಅಖಾಡದ ಆವರಣ, ಎಲ್ಲಿ ನೋಡಿದರಲ್ಲಿ ಜನ. ಯಾರ ಕೈ ಮೇಲಾಗುತ್ತದೆಂಬ ಕುತೂಹಲ, ಗಡಕಚ್ಚುವ ಶಿಳ್ಳೆ ಚಪ್ಪಾಳೆಯ ಸದ್ದು, ಇದೆಲ್ಲದರ ನಡುವೆ ಮಾರಿಕಾಂಬ ಜಾತ್ರೆಯ ಅಂಗವಾಗಿ ನಡೆದ ರಾಜ್ಯಮಟ್ಟದ ಕುಸ್ತಿ ಸಂಪನ್ನಗೊಂಡಿತು.
ಕುಸ್ತಿ ಪಂದ್ಯಾವಳಿಯ ಕೊನೆ ದಿನ ಜನಜಾತ್ರೆ. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಪಂದ್ಯಗಳನ್ನು ನಿಬ್ಬೆರಗಿನಿಂದ ವೀಕ್ಷಿಸಿದರು.
ಅಂತಿಮವಾಗಿ ಕುಸ್ತಿ ಪಂದ್ಯಾವಳಿ ಹಿರಿಯರ ವಿಭಾಗದ ಫೈನಲ್ನಲ್ಲಿ ಧಾರವಾಡದ ಮಿಲ್ಟ್ರಿ ಆನಂದ ಮತ್ತು ಬೆಳಗಾವಿಯ ಮಲ್ಲಪ್ಪ ಪಾಟೀಲ್ ನಡುವೆ ನಡೆದ ಕಾಳಗ ಡ್ರಾನಲ್ಲಿ ಅಂತ್ಯಗೊಂಡಿತು. ಇಬ್ಬರು ಜಟ್ಟಿಗಳೂ ಸಮಬಲ ಹೋರಾಟ ಪ್ರದರ್ಶಿಸಿ ಸೋಲೊಪ್ಪಿಕೊಳ್ಳಲಿಲ್ಲ.
ಹಂಚಿಕೆ: ಪಂದ್ಯದಲ್ಲಿ ವಿಜೇತರಾದವರಿಗೆ ಬೆಳ್ಳಿಗದೆ ಮತ್ತು ರು. 25,000 ಬಹುಮಾನ ಘೋಷಿಸಲಾಗಿತ್ತು. ಆದರೆ, ಪಂದ್ಯ ಸಮಬಲದಲ್ಲಿ ಅಂತ್ಯಗೊಂಡ ಕಾರಣ ನಗದು ಬಹುಮಾನವನ್ನು ಇಬ್ಬರಿಗೂ ಸಮನಾಗಿ ಹಂಚಲಾಯಿತು.
ದಾವಣಗೆರೆಯ ಹಾಲಸ್ವಾಮಿಯನ್ನು ಮಣಿಸುವ ಮೂಲಕ ಶಿವಮೊಗ್ಗ ಕಿರಣ್ ಬೆಳ್ಳಿ ಬಳೆ ಪಡೆದರು. ಶಿವಮೊಗ್ಗದ ಶ್ರೀಕಾಂತ ಕೆರೆಬೀರನಹಳ್ಳಿಯ ಸಂತೋಷ ವಿರುದ್ಧ ಜಯ ಗಳಿಸಿದರು ಕಿರಣ್ ಮತ್ತು ಹರಿಹರದ ಸುಬ್ರಹ್ಮಣ್ಯ ಹಾಗೂ ರಾಣೆಬೆನ್ನೂರಿನ ಕಾರ್ತಿಕ- ಶಿವಮೊಗ್ಗದ ಶಿವು ಮಧ್ಯೆ ಏರ್ಪಟ್ಟ ಕುಸ್ತಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಮೂರು ದಿನದಲ್ಲಿ ಒಟ್ಟು 150 ಜತೆ ಕುಸ್ತಿ ಪಂದ್ಯಾವಳಿ ನಡೆಯಿತು. ವಿಧಾನ ಪರಿಷತ್ ಸದಸ್ಯ ಸಿದ್ದರಾಮಣ್ಣ, ಮಾರಿಕಾಂಬ ಜಾತ್ರೆ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಉಪಾಧ್ಯಕ್ಷ ಉಮಾಪತಿ, ಕಾರ್ಯದರ್ಶಿ ಎಸ್.ಸಿ. ಲೋಕೇಶ, ಮುಖಂಡರಾದ ಶ್ರೀನಿವಾಸ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.