ಅಘೋರೇಶ್ವರ ರಥೋತ್ಸವ
ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧವಾದ ಇಕ್ಕೇರಿ ಶ್ರೀ ಅಘೋರೇಶ್ವರ ದೇವರ ರಥೋತ್ಸವ ಸೋಮವಾರ ನಡೆಯಿತು.
ಮಧ್ಯಾಹ್ನ 12-30ರ ಅಭಿಜಿತ್ ಮುಹೂರ್ತದಲ್ಲಿ ನಡೆದ ಶ್ರೀ ಅಖಿಲಾಂಡೇಶ್ವರಿ ಸಹಿತ ಶ್ರೀ ಅಘೋರೇಶ್ವರ ಸ್ವಾಮಿಯ ಶ್ರೀ ಸ್ಯಂದನ ರಥೋತ್ಸವದಲ್ಲಿ ಅಕ್ಕಪಕ್ಕದ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.
ರಥೋತ್ಸವ ಅಂಗವಾಗಿ ಅಖಿಲಾಂಡೇಶ್ವರಿ ದೇವಿ, ಅಘೋರೇಶ್ವರ, ಬಸವಣ್ಣ ಹಾಗೂ ಟಂಕಶಾಲೆ ಮಹಾಗಣಪತಿಗೆ ಬೆಳ್ಳಿಕವಚ ತೊಡಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಮಾ.11ರಂದು ರಥೋತ್ಸವ ಅಂಗವಾಗಿ ಅವಭೃತ ಕುಂಕುಮಾರ್ಚನೆ ಹಾಗೂ ಸಾರ್ವಜನಿಕ ಗಣಹೋಮ ಏರ್ಪಡಿಸಲಾಗಿದೆ. ಸಂಜೆ 7ಕ್ಕೆ ಬೆಂಗಳೂರಿನ ಭಾಸ್ಕರ್ ರಾವ್ ಅವರಿಂದ ಹರಿಕಥೆ. ನಂತರ ಅಂಬಾರಗೋಡ್ಲು ಪಾಂಚಜನ್ಯ ಯಕ್ಷ ಕಲಾವೇದಿಕೆ ಅವರಿಂದ ಚಿತ್ರಾಕ್ಷಿ ಕಲ್ಯಾಣ ಯಕ್ಷಗಾನ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶರಾವ್ ಕೋರಿದ್ದಾರೆ.
ರಸ್ತೆ ದುರಸ್ತಿ: ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚನೆ
ಶಿವಮೊಗ್ಗ: ಲೋಕೋಪಯೋಗಿ ಬಂದರು ಮತ್ತು ಒಳನಾಡ ಜಲಸಾರಿಗೆ ಇಲಾಖೆಯು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಇಕ್ಕಟ್ಟಿನಿಂದ ಕೂಡಿರುವ ಮಲ್ಪೆ- ಮೊಳಕಾಲ್ಮುರು ರಾಜ್ಯ ಹೆದ್ದಾರಿ-65ರ ಕಿ.ಮೀ. 145.65 ರಿಂದ 151.50ರ ವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಹಾಗೂ ಉದ್ದೇಶಿತ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳಬೇಕಾಗಿರುವುದರಿಂದ ಮಾ.1ರಿಂದ 26ರ ವರೆಗೆ ಅಥವಾ ಕಾಮಗಾರಿಗಳು ಮುಕ್ತಾಯಗೊಳ್ಳುವವರೆಗೆ ತಾತ್ಕಾಲಿಕವಾಗಿ ಮಲ್ಪೆ-ಮೊಳಕಾಲ್ಮುರು ರಾಜ್ಯ ಹೆದ್ದಾರಿಯಲ್ಲಿ ಜಂಕ್ಷನ್ ಉಂಬ್ಳೇಬೈಲು ಸಂಪರ್ಕಿಸಲು ಹಾಗೂ ಉಂಬ್ಳೇಬೈಲಿನಿಂದ ಜಂಕ್ಷನ್ ಸಂಪರ್ಕಿಸಲು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಆದೇಶ ಹೊರಡಿಸಿದ್ದಾರೆ.
ಎನ್.ಆರ್. ಪುರ ಕಡೆ, ಉಂಬ್ಳೇಬೈಲ್‌ನಿಂದ ಹುಣಸೆಕಟ್ಟೆ ಮಾರ್ಗವಾಗಿ ಭದ್ರಾವತಿ- ಭದ್ರಾ ಪ್ರಾಜೆಕ್ಟ್ ಕಡೆಗೆ ಚಲಿಸುವ ವಾಹನಗಳು ಸಮೀಪದ ಲಕ್ಕಿನಕೊಪ್ಪ ಬಳಸಿಕೊಂಡು ಸಂಚಾರ ಮಾಡುವುದು. ಭದ್ರಾವತಿ-ಭದ್ರಾ ಪ್ರಾಜೆಕ್ಟ್ ಕಡೆ ಹುಣಸೇಕಟ್ಟೆಯಿಂದ ಉಂಬ್ಳೇಬೈಲು ಮಾರ್ಗವಾಗಿ ಎನ್.ಆರ್.ಪುರ ಕಡೆಗೆ ಚಲಿಸುವ ವಾಹನಗಳು ಸಮೀಪದ ಲಕ್ಕಿನಕೊಪ್ಪ ಬಳಸಿಕೊಂಡು ಸಂಚಾರ ಮಾಡಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.