ಅನ್ಯರ ತೇಜೋವಧೆಯಲ್ಲೇ ಕಾಲ ಕಳೆಯುತ್ತಿರುವ ಶಾಸಕ
ಕ.ಪ್ರ.ವಾರ್ತೆ, ಸೊರಬ, ಮಾ.10
ಕ್ಷೇತ್ರದ ಜನತೆಯ ಆಶೀರ್ವಾದ ಪಡೆದು ಅವರ ಹಿತ ಕಾಯುವುದನ್ನು ಬಿಟ್ಟು, ಇನ್ನೊಬ್ಬನನ್ನು ತೇಜೋವಧೆ ಮಾಡಲು ಹೊರಟಿರುವ ರಾಜಕಾರಣ ಪ್ರಜಾಪ್ರಭುತ್ವದಲ್ಲಿ ಗಟ್ಟಿಗೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ತಮ್ಮ ಸಹೋದರ, ಹಾಲಿ ಶಾಸಕ ಮಧು ಬಂಗಾರಪ್ಪ ವಿರುದ್ಧ ಹರಿಹಾಯ್ದರು.
ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ ಕಾಂಗ್ರೆಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಭಾರತ್ ನಿರ್ಮಾಣ್ ಪಾದಯಾತ್ರೆ ಬಳಿಕ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು.
ನನ್ನ ಬಗ್ಗೆ ಮತ್ತು ಕಾಂಗ್ರೆಸ್ ಸಾಧನೆ ಬಗ್ಗೆ ಟೀಕೆ ಮಾಡುವಲ್ಲಿ ಕಾಲಹರಣ ಮಾಡುತ್ತಿರುವ ಸ್ಥಳೀಯ ಶಾಸಕರು ಗೆಲವು ಸಾಧಿಸಿ 10 ತಿಂಗಳು ಕಳೆದಿದೆ. ಆದರೆ, ಇದುವರೆಗೂ ಪಟ್ಟಣದ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿ, ಗೊಟರು ಮುಚ್ಚಲು ಅವರಿಂದ ಸಾಧ್ಯವಾಗಿಲ್ಲ. ಇಂಥಹ ಶಾಸಕರನ್ನು ಆರಿಸಿದ ಜನತೆ ಇಂದು ಪಶ್ಚಾತ್ತಾಪಡುವಂತಾಗಿದೆ ಎಂದರು.
ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಯಾರಿಗೇ ಟಿಕೇಟ್ ನೀಡಿದರೂ ಕಾಂಗ್ರೆಸ್ನ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ತಾಲೂಕಿನಿಂದ ಹೆಚ್ಚಿನ ಮತಗಳು ಚಲಾವಣೆ ಆಗುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲು ಕುಮಾರ್ ಬಂಗಾರಪ್ಪ ಅವರ ನೇತೃತ್ವದಲ್ಲಿ ತಾಲೂಕಿನ ಕುಪ್ಪಗಡ್ಡೆ ಶ್ರೀರಾಮ ದೇವಸ್ಥಾನದಿಂದ ಭಾರತ ನಿರ್ಮಾಣ್ ಪಾದಯಾತ್ರೆ ಹೊರಟು ತವನಂದಿ, ಚಿತ್ರಟ್ಟೆಹಳ್ಳಿ, ಹಳೇಸೊರಬ ಗ್ರಾಮಗಳ ಮಾರ್ಗವಾಗಿ ಪಟ್ಟಣ ಮುಖ್ಯರಸ್ತೆ ಮೂಲಕ ಬಸ್ಸ್ಟ್ಯಾಂಡ್ ಆವರಣದವರೆಗೆ ತೆರಳಿ ಸಭೆ ನಡೆಸಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರ ಆರೋಪ ಹೊತ್ತು ಜೈಲಿಗೆ ಹೋಗಿ ಬಂದರೂ ಕಿಂಚಿತ್ತೂ ಪಶ್ಚಾತ್ತಾಪ ಪಡದೇ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಸೊರಬ ಬ್ಲಾಕ್ ಅಧ್ಯಕ್ಷ ಕೆ.ಮಂಜುನಾಥ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಗುತ್ತೇರ್, ಜಿ.ಪಂ. ಸದಸ್ಯೆ ಲಲಿತಾ ನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೀ.ನಾ. ಶ್ರೀನಿವಾಸ್, ಖಜಾಂಚಿ ಎಸ್.ಪಿ. ದಿನೇಶ್, ಮಾಜಿ ಮೇಯರ್ ಸನಾವುಲ್ಲಾ, ಪ.ಪಂ. ಸದಸ್ಯರಾದ ಎಂ.ಡಿ. ಉಮೇಶ್, ಮಂಚಿ ಹನುಮಂತಪ್ಪ, ಸುಜಾಯತ್ವುಲ್ಲಾ, ಯುವ ಅಧ್ಯಕ್ಷ ಮಹಬೂಬ್ ಇದ್ದರು.
ಇಂದು ಸೀಗೆಬಾಗಿಯಲ್ಲಿ ಸಭೆ
ಭದ್ರಾವತಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಯುಪಿಎ ಸರ್ಕಾರದ 10 ವರ್ಷಗಳ ಸಾಧನೆ ಮತ್ತು ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ 8 ತಿಂಗಳ ಜನಪರ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುವುದು ಎಂದು ಪಕ್ಷದ ಶಿವಮೊಗ್ಗ ಜಿಲ್ಲಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕಾರಿಪುರದಲ್ಲಿ ನಡೆದ ಪಾದಯಾತ್ರೆ ಮತ್ತು ಶಿರಾಳಕೊಪ್ಪದ ಬಹಿರಂಗ ಸಭೆಯಲ್ಲಿ ಸಾರ್ವಜನಿಕರಿಂದ ಬೃಹತ್ ಬೆಂಬಲ ವ್ಯಕ್ತವಾಗಿದೆ. ಭದ್ರಾವತಿಯಲ್ಲಿ ಮಂಗಳವಾರ ಹುತ್ತಾ ಕಾಲೋನಿಯಿಂದ ಸೀಗೆಬಾಗಿವರೆಗೆ ಪಾದಯಾತ್ರೆ ನಡೆಸಿದ ನಂತರ ಸೀಗೆಬಾಗಿಯಲ್ಲಿ ಬಹಿರಂಗಸಭೆ ನಡೆಸಲಾಗುವುದು. ಕಾರ್ಯಕ್ರಮದ ನೇತೃತ್ವವನ್ನು ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಶಿವಮೊಗ್ಗದ ಶಾಸಕ ಪ್ರಸನ್ನಕುಮಾರ್ ವಹಿಸಲಿದ್ದಾರೆ. ಭದ್ರಾವತಿಯ ಕಾಂಗ್ರೆಸ್ ಮುಖಂಡರು ಪಾಲ್ಗೊಳ್ಳುವರು ಎಂದು ತಿಳಿಸಿದರು.