ಚಂದ್ರಗುತ್ತಿಯಲ್ಲಿ ಮಹಾರಥೋತ್ಸವ
ಕ.ಪ್ರ.ವಾರ್ತೆ, ಸೊರಬ, ಮಾ.10
ತಾಲೂಕಿನ ಚಂದ್ರಗುತ್ತಿ ಕ್ಷೇತ್ರದಲ್ಲಿ ರೇಣುಕಾಂಬೆ ಜಾತ್ರೆ ಹಿನ್ನೆಲೆ ಸೋಮವಾರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಈ ಹಿಂದೆ ಕೆಲವು ಅಹಿತಕರ ಘಟನೆಗಳು ನಡೆದಿದ್ದ ಹಿನ್ನೆಲೆ ಅಂದಿನಿಂದ ಜಿಲ್ಲಾಡಳಿತ ಜಾತ್ರೆಗೆ ಬಿಗಿ ಬಂದೋಬಸ್ತ್ ಕಲ್ಪಿಸುತ್ತಿದೆ. ಜೋಗತಿ, ಜೋಗಪ್ಪ ಪಡ್ಲಿಗೆ ಸೇವೆ, ಖೋಜಾಗಳಿಗೆ, ಅಂಗಡಿ, ಮುಂಗಟ್ಟು ಇತ್ಯಾದಿಗೆ ನಿಷೇಧ ಹೇರಲಾಗಿತ್ತು. ಆದರೆ, ಒಂದೆರಡು ವರ್ಷಗಳಿಂದ ನಿಷೇಧಾಜ್ಞೆ ಕೊಂಚ ಸಡಿಲಗೊಳಿಸಿದ್ದರಿಂದ ಜಾತ್ರೆ ಪುನಃ ತನ್ನ ಹಳೆಯ ಸೊಗಡು ಪಡೆದುಕೊಂಡಿದ್ದು ವಿಶೇಷ.
ಬೆತ್ತಲೆ ಸೇವೆ, ಸೊಪ್ಪಿನುಡಿಗೆ ಹೊರತುಪಡಿಸಿ, ಇನ್ನುಳಿದ ಎಲ್ಲ ಪೂಜೆ, ಪುನಸ್ಕಾರಗಳು ಈಗ ಸಾಂಗವಾಗಿ ನೆರವೇರಿತು. ಉತ್ತರ ಕರ್ನಾಟಕ, ದಾವಣಗೆರೆ, ಹಿರೇಕೆರೂರು ಭಾಗದ ಭಕ್ತರು ಕ್ಷೇತ್ರದಲ್ಲಿ ಒಂದು ವಾರದಿಂದ ಮೊದಲೇ ಭಕ್ತರು ಬೀಡುಬಿಟ್ಟಿದ್ದರು.
ತಂಗಲು ವ್ಯವಸ್ಥೆ ಇರಲಿಲ್ಲ: ಜಾತ್ರೆಯ ಕುಂದುಕೊರತೆ ನೀಗಿಸುವ ನಿಟ್ಟಿನಲ್ಲಿ ತಾಲೂಕು, ಗ್ರಾಮ ಆಡಳಿತ ಬಹುಮಟ್ಟಿಗೆ ಯಶಸ್ವಿಯಾಯಿತು. ನೀರು ಪೂರೈಸುವಲ್ಲಿ ಗ್ರಾಮ ಆಡಳಿತ, ವರದಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಸಾನಳ್ಳಿ ಮನೆತನದವರು ಸಾಥ್ ನೀಡಿದ್ದರು. ಶೌಚಾಲಯದ ವ್ಯವಸ್ಥೆ ಕೂಡ ಸಮರ್ಪಕವಾಗಿತ್ತು. ತಂಗಲು ವ್ಯವಸ್ಥೆ ಇಲ್ಲದಿದ್ದರೂ ತೀರಾ ತಲೆಕೆಡಿಸಿಕೊಳ್ಳದ ಭಕ್ತರಿಗೆ ಲಗ್ಗೇಜ್ ಕ್ಯಾರಿಯರ್, ಟ್ರ್ಯಾಕ್ಟರ್, ಆಟೋಗಳೇ ನೆರಳಿನಾಶ್ರಯ ನೀಡಿದ್ದವು.
ಆಚರಣೆ ಸಾಂಗ: ಸ್ನೇಹಕೂಟ ಬಳಗ ಹಾಗೂ ಹಲವು ಭಕ್ತರ ನೆರವಿನಿಂದ ಪಾನಕ, ಬೆಲ್ಲ, ನೀರು, ಮಜ್ಜಿಗೆ ಸೇವೆ ಕೂಡ ಇತ್ತು. ವಿಶೇಷವಾಗಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದವರು ದೇವದಾಸಿ ಪದ್ಧತಿ, ಬೆತ್ತಲೆ ಸೇವೆ ಮುಂತಾದ ಮೂಢನಂಬಿಕೆ ಹೋಗಲಾಡಿಸುವ ಕುರಿತು ಪ್ರಚುರಪಡಿಸಿದರು. ಹೊಳೆ ಸಿರಿಗೆರೆ ಗ್ರಾಮದ ಕಲಾ ತಂಡದ ಭಜನಾಮೇಳ, ವರಾಹಾ ಗ್ರಾಮದ ಹಲಗೆ ಮೇಳ ಗಮನ ಸೆಳೆದವು.
ಉದ್ದಂಡ ನಮಸ್ಕಾರ, ಮುತ್ತು ಕಟ್ಟಿಸುವಿಕೆ, ಮುಡಿಸೇವೆ, ಚೌಲ, ಕಿವಿ ಚುಚ್ಚಿಸುವುದು, ಪಡ್ಲಿಗೆ ಸೇವೆ, ಮೀಸಲು ಬುತ್ತಿ ಸೇವೆ, ಹರಕೆ ಮುಂತಾದವುಗಳೊಂದಿಗೆ ಪ್ರಧಾನ ಅರ್ಚಕ ಅರವಿಂದ ಭಟ್, ಕೆಳದಿ ರಾಮಭಟ್ ನೇತೃತ್ವದ ಧಾರ್ಮಿಕ ವಿಧಿ, ತಾಂತ್ರಿಕ ಪೂಜಾ ವಿಧಾನದ ರಥೋತ್ಸವ ಯಶಸ್ವಿಯಾಗಿ ನಡೆಯಿತು.
ಉಪವಿಭಾಗಾಧಿಕಾರಿ ಉದಯಕುಮಾರ್ ಶೆಟ್ಟಿ, ತಹಸೀಲ್ದಾರ್ ನಟರಾಜ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಇಸ್ಮಾಯಿಲ್, ಡಿವೈಎಸ್ಪಿ, ಸೈಯದ್ ಇಸಾಕ್, ವೃತ್ತ ನಿರೀಕ್ಷಕ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಜಿಪಂ ಮಾಜಿ ಉಪಾಧ್ಯಕ್ಷ ಪಾಣಿರಾಜಪ್ಪ, ಮಾಜಿ ಸದಸ್ಯೆ ದೇವಕಿ ಪಾಣಿರಾಜಪ್ಪ, ಇಲ್ಲಿನ ಗ್ರಾಪಂ ಅಧ್ಯಕ್ಷ ಸದಸ್ಯರು, ಇನ್ನೂ ಅನೇಕ ಅಧಿಕಾರಿಗಳು, ರಕ್ಷಣಾ, ಕಂದಾಯ ಇಲಾಖೆಯವರು, ಮುಖಂಡರು, ಸ್ಥಳೀಯ ಗಣ್ಯ ವ್ಯಕ್ತಿಗಳು, ಜಾತ್ರಾ ಸಮಿತಿಯವರು ಮೊದಲಾದವರು ಇದ್ದರು.