ಮಧ್ಯವರ್ತಿಗಳಿಂದ ಜೋಳ, ಬತ್ತ ಖರೀದಿ: ಆರೋಪ
ಶಿಕಾರಿಪುರ: ಬತ್ತ, ಮೆಕ್ಕೆಜೋಳದ ಖರೀದಿ ಕೇಂದ್ರದ ಅಧಿಕಾರಿಗಳು ಖಾಸಗಿ ವ್ಯಾಪಾರಸ್ಥರ ಜತೆ ಅಕ್ರಮವಾಗಿ ಶಾಮೀಲಾಗಿ ರೈತರನ್ನು ನಿಯಂತ್ರಿಸಿ ಮಧ್ಯವರ್ತಿಗಳಿಂದ ಖರೀದಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ರೈತರು ಸೋಮವಾರ ಕೇಂದ್ರದ ಮುಂಭಾಗದಲ್ಲಿ ಬಸ್‌ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಪುರಸಭಾ ಸದಸ್ಯ ಮಹೇಶ್ ಹಲ್ಮಾರ್ ಮಾತನಾಡಿ, ಖರೀದಿ ಕೇಂದ್ರದ ಅಧಿಕಾರಿಗಳು ಕೆಲ ಖಾಸಗಿ ವ್ಯಾಪಾರಸ್ಥರ ಜತೆ ಅಕ್ರಮವಾಗಿ ಶಾಮೀಲಾಗಿ ಕ್ವಿಂಟಾಲ್ ಜೋಳ, ಬತ್ತಕ್ಕೆ 100 ಆಸೆಗಾಗಿ ರೈತರಿಂದ ಖರೀದಿಸದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆಮಿಷ: ಕೇಂದ್ರದಲ್ಲಿ ಖರೀದಿಗಾಗಿ ಕಳೆದ ತಿಂಗಳ ಕಾಲದಿಂದ ಕಾಯುತ್ತಿರುವ ರೈತರ ಬಳಿಗೆ ಕೆಲ ಖಾಸಗಿ ವ್ಯಾಪಾರಸ್ಥರು ತೆರಳಿ ಮಾರುಕಟ್ಟೆಯ ಹೊರಗಡೆ ಜೋಳ, ಬತ್ತವನ್ನು ತಂದಲ್ಲಿ ಖರೀದಿಸುವುದಾಗಿ ಆಮಿಷ ಒಡ್ಡುತ್ತಿದ್ದಾರೆ ಎಂದರು.
ಸಚಿವರ ಗಮನಕ್ಕೆ: ಇಂತಹ ಕೃತ್ಯಕ್ಕೆ ಪರೋಕ್ಷವಾಗಿ ಸಹಕರಿಸುತ್ತಿರುವ ಎಪಿಎಂಸಿ ಹಾಗೂ ರಾಜ್ಯ ಗೋದಾಮು ನಿಗಮದ ಅಧಿಕಾರಿಗಳ ವರ್ತನೆ ಖಂಡಿಸಿದರು. ಈ ಕೆಲಸ ಸ್ಥಗಿತಗೊಳಿಸದಿದ್ದಲ್ಲಿ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು ಎಚ್ಚರಿಕೆ ನೀಡಿದರು.
ತಿಂಗಳ ಕಾಲದಿಂದ ಖರೀದಿ ಕೇಂದ್ರದಲ್ಲಿ ಕಾಯುತ್ತಿರುವ ಶೆಟ್ಟಿಹಳ್ಳಿ ಚೌಡಪ್ಪ ಮಾತನಾಡಿ, ಕೆಲ ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೇಂದ್ರದಲ್ಲಿನ ಜೋಳ, ಬತ್ತದಲ್ಲಿ ಮೊಳಕೆ ಕಾಣುತ್ತಿದೆ. ಇಂತಹ ಪರಿಸ್ಥಿತಿಯಿಂದ ರೈತರು ಕಂಗಾಲಾಗಿದ್ದಾರೆ. ಕೂಡಲೇ ಖರೀದಿಸಿ ಹಸಿರು ಚೀಟಿ (ಗ್ರೀನ್ ವೋಚರ್) ನೀಡಿದಲ್ಲಿ ಮಾತ್ರ ನೆಮ್ಮದಿಯಿಂದ ಗ್ರಾಮಕ್ಕೆ ತೆರಳಬಹುದಾಗಿದೆ ಎಂದರು.
ಖರೀದಿ ಸ್ಥಗಿತ: ರಾಜ್ಯ ಗೋದಾಮು ನಿಗಮದ ಅಧಿಕಾರಿ ಗೋಪೇಶ್ವರ್ ಸಿಂಗ್ ಮಾತನಾಡಿ, ಕೇಂದ್ರದಲ್ಲಿ ಈಗಾಗಲೇ 80 ಸಾವಿರಕ್ಕೂ ಅಧಿಕ ಚೀಲ ಜೋಳ, ಬತ್ತ ಖರೀದಿಗಾಗಿ ಕಾಯುತ್ತಿದ್ದು, ಶಿಕಾರಿಪುರ, ಶಿರಾಳಕೊಪ್ಪ, ಶಿವಮೊಗ್ಗದ ಗೋದಾಮುಗಳು ಸಂಪೂರ್ಣಗೊಂಡಿವೆ. ಈ ಹಿನ್ನೆಲೆ ಖರೀದಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಇದೀಗ ಸರ್ಕಾರ ರೈತರಿಗೆ ಹಣ ಪಾವತಿಗೆ ಅಪೆಕ್ಸ್ ಬ್ಯಾಂಕ್ ಮೂಲಕ 200 ಕೋಟಿ ಸಾಲ ಪಡೆಯಲು ಸಮ್ಮತಿ ಸೂಚಿಸಿದ್ದು, ಗೋದಾಮುಗಳ ಭದ್ರತೆ ಮೇರೆಗೆ ಶೀಘ್ರದಲ್ಲಿ ಸಾಲ ಬಿಡುಗಡೆಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ಅವರು, ಜ.20ರ ವರೆಗಿನ ಹಣ ಪಾವತಿಸಿ ಖರೀದಿಸುವುದಾಗಿ ಭರವಸೆ ನೀಡಿದರು.
ರಾಜ್ಯ ಉಗ್ರಾಣ ನಿಗಮದ ಪ್ರಾದೇಶಿಕ ಪ್ರಬಂಧಕ ವೆಂಕಟೇಶ್ ಜತೆ ದೂರವಾಣಿ ಮೂಲಕ ಮಾತನಾಡಿದ ರೈತರಿಗೆ ನಿತ್ಯ ಕನಿಷ್ಠ 10 ಲಾರಿಕಳುಹಿಸಿ ಸಂಗ್ರಹ ಕಡಿಮೆಗೊಳಿಸುವುದಾಗಿ ತಿಳಿಸಿದರು.
ಮುಖಂಡ ಮಟ್ಟಿಕೋಟೆ ಶಿವಬಸಪ್ಪ, ಸಂಜಯ್, ಗಂಗಾನಾಯ್ಕ್, ರವಿನಾಯ್ಕ್, ಶೇಖರಪ್ಪ, ರಮೇಶ್, ಜಗದೀಶ್ ತರಲಘಟ್ಟ, ಯುವ ಕಾಂಗ್ರೆಸ್ ಕಾರ್ಯದರ್ಶಿ ಸುಧೀರ್, ಜಿ.ಎಸ್. ಸಿದ್ದು ಮತ್ತಿತರರ ವಿವಿಧ ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.