ಮಹಿಳೆಯರಿಗೆ ಸಾಮಾಜಿಕ ಜ್ಞಾನ ಅವಶ್ಯ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಮಾ. 10
ಓದು, ಬರಹಗಳಿಂದ ಮಾತ್ರ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ನಮಗೆ ಸಾಮಾಜಿಕ ಜ್ಞಾನ ಅತ್ಯವಶ್ಯವಾಗಿದೆ ಎಂದು ಕರ್ನಾಟಕ ಜನಪದ ವಿಶ್ವವಿದ್ಯಾಲಯದ ವಿಭಾಗೀಯ ಮುಖ್ಯಸ್ಥ ಪ್ರೊ. ಎಂ. ಚಂದ್ರ ಪೂಜಾರಿ ಹೇಳಿದರು.
ತಾಲೂಕಿನ ಕಾಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸಮೃದ್ಧಿ ವಿವಿಧೋದ್ದೇಶಗಳ ಮಹಿಳಾ ಸಂಘ ಜಯನಗರ ಶಿಗ್ಗಾಂವಿ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ಅತಿಥಿಯಾಗಿ ಅವರು ಮಾತನಾಡಿದರು.
ಮಹಿಳಾ ದಿನಾಚರಣೆಯನ್ನು ಹೆಚ್ಚು ಪರಿಗಣಿಸಬೇಕಾಗಿರುವುದು ಪುರುಷರು. ಇಂದಿನ ಮಹಿಳೆಯರಿಗೆ ಸಂಪೂರ್ಣ ಸಮಾನತೆಯ ಹಕ್ಕನ್ನು ಕೊಟ್ಟು ಅವಳೂ ಸಹಿತ ಧೈರ್ಯದಿಂದ ಬಾಳಲು ಅವಕಾಶ ಮಾಡಿ ಕೊಡಬೇಕಾದ ಜವಾಬ್ದಾರಿ ಪುರುಷರ ಮೇಲಿದೆ. ಇಂದು ಮಹಿಳೆಯರನ್ನು ಸಮಾನತೆ ದೃಷ್ಟಿಯಿಂದ ನೋಡಿದಾಗ ಸಾಧನೆಗೆ ಒಂದು ಮೌಲ್ಯ ಸಿಕ್ಕಂತಾಗಲಿದೆ ಎಂದರು.
ಶಿಗ್ಗಾಂವಿ ಸರ್ಕಾರಿ ಉರ್ದು ಪ್ರೌಢಶಾಲೆಯ ಸಹಶಿಕ್ಷಕಿ ವಿನೋದಾ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತಿಹಾಸದಲ್ಲಿ ಮಹಿಳೆ ಬಗ್ಗೆ ತಿಳಿಯದೆ ಸದ್ಯ ಮಹಿಳೆ ಸ್ಥಿತಿ ಹೇಗಿದೆ ಎಂಬುದನ್ನು ಮೊದಲು ಅರಿತು ನಡೆಯಬೇಕು. ದುಷ್ಚಟಗಳ ದಾಸರಾದ ಗಂಡಸರ ಮಕ್ಕಳಿಗೆ ತಾಯಿಯೇ ಆಸರೆ ಆದ್ದರಿಂದ ಹೊಂದಾಣಿಕೆ ಸ್ತ್ರೀಯ ಹುಟ್ಟುಗುಣ, ಕಷ್ಟಗಳನ್ನು ಮೆಟ್ಟಿನಿಲ್ಲುವ ಶಕ್ತಿ ಇಂದಿನ ಮಹಿಳೆಯರಿಗೆ ಸಾಮಾನ್ಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮೃದ್ಧಿ ವಿವಿಧೋದ್ದೇಶಗಳ ಮಹಿಳಾ ಸಂಘದ ಅಧ್ಯಕ್ಷೆ ಅನಸೂಯಾ ಬಳಿಗಾರ ವಹಿಸಿದ್ದರು.
ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಎಂ.ಬಿ. ಶ್ವೇತಾ ಮಾತನಾಡಿದರು. ಸಹಾಯಕ ಕಾರ್ಯಕರ್ತರಾಗಿ ಸಂತೋಷ ಸುಬೇದಾರ, ಪರಸನಗೌಡ ಪಾಟೀಲ, ಗಣೇಶ ಭಜಂತ್ರಿ, ಮಾಲತೇಶ ಕಳ್ಳಿಗುಡ್ಡ, ರಾಮಣ್ಣಾ ವಾಲ್ಮೀಕಿ ಹಾಗೂ ಗ್ರಾಮದ ಮಹಿಳಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಲ್ಮಾ ನದಾಫ್ ನಿರೂಪಿಸಿದರು. ಅಭಿನಯಾ ಎಚ್., ವಂದಿಸಿದರು.