ಗುರುಶಾಂತ ಗವಾಯಿಗಳ ವಾರ್ಷಿಕ ಸಂಗೀತೋತ್ಸವ
ಸೊರಬ: ಇಲ್ಲಿನ ಸಂಗೀತ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಗಾಯನ ಚತುರ ದಿ. ಎಚ್.ಜಿ. ಗುರುಶಾಂತ ಗವಾಯಿಗಳ ಸ್ಮರಣಾರ್ಥ 49ನೇ ವಾರ್ಷಿಕ ಸಂಗೀತೋತ್ಸವ, ಗಾಯನ ವಿಶಾರದ ದಿ.ಪಂಡಿತ್ ಬಿ.ನಾರಾಯಣಪ್ಪ ಅವರ 4ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಇಲ್ಲಿನ ನಾಮದೇವ ಹರಿ ಮಂದಿರದಲ್ಲಿ ಜರುಗಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿ.ಗಂಗಾಧರ್ ನಾಡಿಗೇರ್ ಕುಪ್ಪಗಡ್ಡೆ ಸ್ಮರಣಾರ್ಥ ಚಂದ್ರಹಾಸ ಪ್ರಶಸ್ತಿಯನ್ನು ಧಾರವಾಡದ ಪಂಡಿತ್ ಡಿ.ಕುಮಾರ್ ದಾಸ್ ಇವರಿಗೆ ಕುಪ್ಪಗಡ್ಡೆ ಗಾಯತ್ರಿಬಾಯಿ ನಾಡಿಗೇರ್ ಪ್ರಾಯೋಜಿಸಿದರು. ದಿ. ಬಿ.ನಾರಾಯಣಪ್ಪ ಸ್ಮರಣಾರ್ಥ ನಾದ ಸುರಭಿ ಪ್ರಶಸ್ತಿಯನ್ನು ಮಂಜುನಾಥ ಬಟ್ನೆಬ್ಬೂರು ಶಿರಸಿ ಇವರಿಗೆ ಸಾವಿತ್ರಿ ಬಾಯಿ ಕೋಂ ನಾರಾಯಣಪ್ಪ ಮತ್ತು ಮಕ್ಕಳು ಪ್ರಾಯೋಜಿಸಿದರು.
ಪ್ರಶಸ್ತಿ ಸ್ವೀಕಾರ: ತಬಲಾ ವಿದ್ವಾನ್ ಶ್ರೀಪಾದರಾವ್ ಕಲ್ಗುಂಡಿಕೊಪ್ಪ ಅವರ ಸ್ಮರಣಾರ್ಥ ನೀಡುವ ಯುವ ಪ್ರಶಸ್ತಿಯನ್ನು ಕು. ಸುದಾಮ ದಾನಗೇರಿ ಇವರಿಗೆ ವಿಶಾಲಕ್ಷಿ ಶ್ರೀಪಾದರಾವ್ ಮತ್ತು ಮಕ್ಕಳು ಪ್ರಾಯೋಜಿಸಿದರು. ಪಾರ್ವತಿಭಟ್ ಸುಗಾವಿ ಇವರ ಸ್ಮರಣಾರ್ಥ ನೀಡುವ ಕಲಾ ಪೋಷಕ ಪ್ರಶಸ್ತಿಯನ್ನು ಕೃಷ್ಣರಾವ್ ಕಲ್ಗುಂಡಿಕೊಪ್ಪ ಸ್ವೀಕರಿಸಿದರು. ಕಮಲಾಭಟ್ ಮತ್ತು ರಘುಪತಿ ಭಟ್ ಪ್ರಾಯೋಜಿಸಿದರು.
ತಾಲೂಕು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಲೌಖಿಕ ಜಗತ್ತನ್ನು ಆಧ್ಯಾತ್ಮಿಕವಾಗಿ ಬಿಂಬಿಸುವ ಶಕ್ತಿ ಸಂಗೀತಕ್ಕಿದೆ. ದೇಶದ ನಿಜವಾದ ಆತ್ಮಶಕ್ತಿಯನ್ನುಳ್ಳ ಶಾಸ್ತ್ರೀಯ ಸಂಗೀತವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮುದ ನೀಡಿದ ಕಾರ್ಯಕ್ರಮ: ಸಮಿತಿಯ ಅಧ್ಯಕ್ಷೆ ಗಾಯತ್ರಿಬಾಯಿ ನಾಡಿಗೇರ್ ಅಧ್ಯಕ್ಷತೆ ವಹಿಸಿದ್ದರು. ಆನವಟ್ಟಿ ರಾಮಣ್ಣ ಭಜಂತ್ರಿ ಮಡಿವಾಳಯ್ಯ ಹಾಲಿ ತಬಲಾ ಸಾಥ್ ಜೊತೆಗೆ ಶಹನಾಯಿ ವಾದನ, ಬಾಲಚಂದ್ರ ಯಾಜಿ ಅವರು ಸತೀಶ್ ಹೆಗಡೆ ತಬಲಾ ಸಾಥ್‌ನೊಂದಿಗೆ, ಶಾಲಿನಿ ಉರಣಕರ್ ಅವರು ತಬಲಾ ವಾದಕ ವಸಂತ್ ಬಂಬೊರೆಯೊಂದಿಗೆ, ತೇಜಸ್ವಿ ಹೆಗಡೆ ಅವರು ತಬಲಾ ವಾದಕ ಸುಬ್ರಹ್ಮಣ್ಯ ಹೆಗಡೆ ಅವರೊಂದಿಗೆ, ಇವರೆಲ್ಲರಿಗೂ ಸಾಥ್ ನೀಡಿದ ಸುಧೀರ್ ಬಂಗ್ರೆ ಅವರ ಹಾರ್ಮೋನಿಯಂ ವಾದನದ ಗಾಯನ, ಕುಮಾರ ಸುಧಾಮ ದಾನಗೇರಿ ಅವರು ಪ್ರಕಾಶ್ ಹೆಗಡೆ ಹಾರ್ಮೋನಿಯಂ ಮತ್ತು ತುಕಾರಾಂ ರಂಗಧೋಳ್ ಅವರ ತಬಲ ಸಾಥ್‌ನೊಂದಿಗೆ ನಡೆದ ಗಾಯನ, ಬೆಂಗಳೂರು ವೆಂಕಟೇಶ ಶರ್ಮಾ ಅವರು ಇಂದೂಧರ ಎಚ್.ಪೂಜಾರ್ ಹಾರ್ಮೋನಿಯಂ, ಸಂಜೀವ ಪೋತದಾರ್ ಅವರ ತಬಲಾ ಸಾಥ್‌ನೊಂದಿಗೆ ನಡೆಸಿದ ಗಾಯನ, ವಿಜಯಕುಮಾರ್ ಬಿ.ಎನ್. ಅವರು ವಾಣಿಶ್ರೀ ಪ್ರಭು ಅವರ ಹಾರ್ಮೋನಿಯಂ ಲೆಹರಾದೊಂದಿಗಿನ ತಬಲಾ ಸೋಲೊ, ಅನಂತ ಹೆಗಡೆ ಹಿರೆಹದ್ದ ಅವರು ಭರತ ಹೆಗಡೆ ಅವರ ಹಾರ್ಮೋನಿಯಂ, ವಾಜಗಾರ ಅನಂತಹೆಗಡೆ ತಬಲಾ ಸಾಥ್‌ನ ಗಾಯನ, ಮುಂಬಯಿನ ಮುಕುಂದರಾಜ್ ದೇವ್ ಅವರು ಶ್ರೀರಂಗ ಟೆಂಡೆ ಹಾರ್ಮೋನಿಯಂ ಲೆಹರದೊಂದಿಗಿನ ತಬಲ ಸೋಲೋ, ಮುಂಬಯಿ ಡೊಂಬಿವಿಲಿಯ ಕುಮಾರಿ ನೂಪುರ್ ಕಾಫಿದ್ ಅವರ ಗಾಯನ ಮತ್ತು ಬೆಂಗಳೂರಿನ ಅನುಪಮ ಭಾಗವತ್ ಅವರ ಸಿತಾರ್ ವಾದನ, ಧಾರವಾಡದ ಕುಮಾರ್ ದಾಸ್ ಅವರ ಗಾಯನ, ಭರತ ಹೆಗಡೆ ಅವರ ಹಾರ್ಮೋನಿಯಂ, ನೆಬ್ಬೂರು ಮಂಜುನಾಥ ಭಟ್ ಅವರ ತಬಲಾ ವಾದನ, ಇಂದೂಧರ ಎಚ್.ಪೂಜಾರ್ ಅವರ ಗಾಯನ ಕಾರ್ಯಕ್ರಮ ಸಂಗೀತಾಸಕ್ತರನ್ನು ರಂಜಿಸಿತು.
ಸೂರ್ಯನಾರಾಯಣ ಹೆಗಡೆ ಪ್ರಾರ್ಥಿಸಿ, ಎಚ್.ಎಸ್. ಮಂಜಪ್ಪ ಸ್ವಾಗತಿಸಿ, ಮಂಜುನಾಥ ಬೆನ್ನೂರು ಪ್ರಾಸ್ತಾವಿಕ ಮಾತನಾಡಿದರು. ರಘುಪತಿ ಎನ್. ಭಟ್ ಸುಗಾವಿ ನಿರೂಪಿಸಿ, ವಂದಿಸಿದರು. ಅನೇಕ ಸಂಗೀತಾಸಕ್ತರು, ಕಲಾವಿದರು, ಬೆನ್ನೂರು ಕುಟುಂಬದವರು ಪಾಲ್ಗೊಂಡಿದ್ದರು.