ಜೆಡಿಎಸ್ ತತ್ವ, ಸಿದ್ಧಾಂತಗಳಿಲ್ಲದ ಪಕ್ಷ'
ಶಿವಮೊಗ್ಗ: ಜೆಡಿಎಸ್ ತತ್ವ ಸಿದ್ಧಾಂತಗಳಿಲ್ಲದ ರಾಜಕೀಯ ಪಕ್ಷ. ಹೀಗಾಗಿ ಅವರು ಯಾರನ್ನು ಬೇಕಾದರೂ ಚುನಾವಣೆ ಕಣಕ್ಕಿಳಿಸುತ್ತಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆ ಕುಟುಂಬಗಳ ನಡುವಿನ ಹೋರಾಟ ಅಲ್ಲ. ಭಿನ್ನ ರಾಜಕೀಯ ಪಕ್ಷಗಳ ನಡುವೆ ಸಂವಿಧಾನಾತ್ಮಕವಾಗಿ ನಡೆಯುವ ಜಿದ್ದಾಜಿದ್ದಿ ಎಂದು ವಿಶ್ಲೇಷಿಸಿದರು.
ಜೆಡಿಎಸ್ ಪಕ್ಷ ಯಾರನ್ನು ಕಣಕ್ಕಿಳಿಸಿದರೂ ನಮ್ಮ ಆಕ್ಷೇಪ ಏನೂ ಇಲ್ಲ. ಆದರೆ, ಯಾವ ಪಕ್ಷ, ಯಾವ ವ್ಯಕ್ತಿಗೆ ಮತ ನೀಡಬೇಕೆಂದು ಶಿವಮೊಗ್ಗದ ಜನ ನಿರ್ಧರಿಸುತ್ತಾರೆ ಎಂದರು.
ತಾವು ಶಿವಮೊಗ್ಗದಿಂದ ಸ್ಪರ್ಧಿಸುವ ಬಗ್ಗೆ ಇದೂವರೆಗೆ ಪಕ್ಷ ಯಾವುದೇ ತೀರ್ಮಾನ ಕೈಗೊಂಡಿಲ್ಲ. ತಮಗೇ ಸ್ಪರ್ಧಿಸಲು ಸೂಚಿಸಿದರೆ ನಾನು ಸಿದ್ಧ. ಇಲ್ಲವಾದರೆ ಪಕ್ಷ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಅವರ ಪರ ಮತ ಯಾಚಿಸುತ್ತೇನೆ ಎಂದರು.
ಜೆಡಿಯು ಅಭ್ಯರ್ಥಿ ಕಣಕ್ಕೆ
ಶಿವಮೊಗ್ಗ: ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಶಿವರುದ್ರಯ್ಯ ಸ್ವಾಮಿ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಸಲು ಜೆಡಿಯು ಜಿಲ್ಲಾ ಘಟಕ ತೀರ್ಮಾನಿಸಿದೆ. ಸೋಮವಾರ ನಗರದಲ್ಲಿ ಜಿಲ್ಲಾಧ್ಯಕ್ಷ ಹಳ್ಳೂರು ಜಿ. ಪ್ರಹ್ಲಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜತೆಗೆ ಲೋಕಸಭೆ ಚುನಾವಣೆ ಶಿವಮೊಗ್ಗ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ವಕ್ತಾರರನ್ನಾಗಿ ರವಿಕಿಶನ್ ಅವರನ್ನು ನೇಮಿಸಲಾಗಿದೆ.