ಎನ್ನೆಸ್ಸೆಸ್ ಸಮಾರೋಪ ಸಮಾರಂಭ
ಶಿವಮೊಗ್ಗ: ಕಮಲಾ ನೆಹರೂ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭವು ಮಾರ್ಚ್ 13ರಂದು ಮಧ್ಯಾಹ್ನ 2.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಉಪಪ್ರಾಚಾರ್ಯ ಡಾ. ಗೌಡ್ರಶಿವಣ್ಣ ಸಮಾರೋಪ ಭಾಷಣ ಮಾಡುವರು. ರಾಷ್ಟ್ರೀಯ ಶಿಕ್ಷಣ ಸಮಿತಿಯ ಖಜಾಂಚಿ ಟಿ.ಆರ್. ಅಶ್ವತ್ಥನಾರಾಯಣ ಮುಖ್ಯ ಅತಿಥಿಯಾಗಿ ಆಗಮಿಸಲಿರುವರು. ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ಕುಂದನ್ ಬಸವರಾಜು ಉಪಸ್ಥಿತರಿರುವರು. ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು.
ಇಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ವಿದ್ಯುತ್ ಮಾರ್ಗದ ಸ್ಥಳಾಂತರ ಕಾರ್ಯ ಇರುವುದರಿಂದ, ಮಾರ್ಚ್ 13ರಂದು ಬೆಳಿಗ್ಗೆ 9.30ರಿಂದ ಸಂಜೆ 6ರ ವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸವಾಯಿ ಪಾಳ್ಯ, ಸೀಗೆಹಟ್ಟಿ, ಕೆ.ಆರ್. ಪುರಂ ರಸ್ತೆ, ವಂದನ ಟಾಕೀಸ್ ರಸ್ತೆ, ಎಸ್. ಸಿದ್ದಯ್ಯ ರಸ್ತೆ, ಗಾಂಧಿ ಬಜಾರ್, ಕುಂಬಾರಗುಂಡಿ, ಬಿ.ಬಿ. ರಸ್ತೆ, ಆಜಾದ್‌ನಗರ, ಕಲ್ಲಪ್ಪನ ಕೇರಿ, ಟಿ.ಎಸ್.ಆರ್. ರಸ್ತೆ, ರವಿ ವರ್ಮ ಬೀದಿ, ಮಂಡ್ಲಿ ಬೈಪಾಸ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಇಂದು ಯಕ್ಷಗಾನ ಪ್ರದರ್ಶನ
ಜೋಗ್‌ಫಾಲ್ಸ್: ಪ್ರಪ್ರಥಮ ಬಾರಿಗೆ ಜೋಗದ ಎಸ್.ವಿ.ಪಿ. ಕಾಲೋನಿಯ ಸರ್.ಎಂ.ವಿ. ಕ್ರಿಡಾಂಗಳದಲ್ಲಿ, ನಿರ್ಮಿಸಿರು ವಿದ್ಯುದ್ದೀಪಾಲಂಕೃತ ಸ್ಟೀಲಿನ ಭವ್ಯ ರಂಗಮಂಟಪದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ ಕಲಾವಿದರು ಮಾ.13ರ ಗುರುವಾರದಂದು ರಾತ್ರಿ 9.30ಕ್ಕೆ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಎಂಬ ಪುಣ್ಯಕಥಾ ಭಾಗವನ್ನು ಅಭಿನಯಿಸಿ ತೋರಿಸಲಿದ್ದಾರೆ ಎಂದು ಜೋಗ್ ಫಾಲ್ಸ್ ನ ಯಕ್ಷಗಾನ ಬಯಲಾಟ ಸೇವಾ ಸಮಿತಿ ತಿಳಿಸಿದೆ.