ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕುಡಿವ ನೀರು ಯೋಜನೆಯಲ್ಲಿ ಕಳಪೆ ಕಾಮಗಾರಿ: ಗ್ರಾಮಸ್ಥರ ಆಕ್ರೋಶ

Rashmi Kasaragodu
Updated On : 13 Mar 2014, 11:36 am

ಹೊಸನಗರ: ಗ್ರಾಪಂ ವ್ಯಾಪ್ತಿಯ ಗದ್ದೆಮನೆಯಲ್ಲಿ ಕುಡಿವ ನೀರು ಯೋಜನೆ ಮಂಜೂರಾಗಿ ವರ್ಷ ಕಳೆದರೂ ಇನ್ನೂ ಕುಡಿಯುವ ನೀರಿನ ಸೌಲಭ್ಯ ಸಿಕ್ಕಿಲ್ಲ ಮತ್ತು ಕಾಮಗಾರಿ ತೀರಾ ಕಳಪೆಯಿಂದ ಕೂಡಿದ್ದು, ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿನ ಅವ್ಯವಸ್ಥೆ ಮತ್ತು ಕಳಪೆ ಕಾಮಗಾರಿ ಸಂಬಂಧ ಸ್ಥಳೀಯರು ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ದೂರು ಮುಟ್ಟಿಸಿದ್ದರು. ಈ ಹಿನ್ನಲೆಯಲ್ಲಿ ಜಿಪಂ ಎಇಇ ಮಂಜುನಾಥ ದೇಸಾಯಿ ಸ್ಥಳಕ್ಕಾಗಮಿಸಿ ಕಾಮಗಾರಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಗ್ರಾಮಸ್ಥರ ಮಾತಿನ ಚಕಮಕಿ ನಡೆಯಿತು.
ಆಕ್ರೋಶ: ಕಾಮಗಾರಿ ಆರಂಭಗೊಂಡು ಹಲವು ಸಮಯ ಕಳೆದರೂ ಇನ್ನೂ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿಲ್ಲ. ಎರಡುವರೆ ಅಡಿ ಟ್ರಂಚ್ ತೋಡಿ ನೀರಿನ ಪೈಪ್ ಅಳವಡಿಸಬೇಕಿದ್ದರೂ, ಕೇವಲ ಅರ್ಧ ಅಡಿ ಮಣ್ಣು ಕೆದರಿ ಪೈಪ್ ಕೂರಿಸಲಾಗಿದೆ ಎಂದು ಮಣ್ಣು ತೆಗೆದು ಕಳಪೆ ಕಾಮಗಾರಿ ಬಗ್ಗೆ ಅಧಿಕಾರಿಗಳಿಗೆ ಗ್ರಾಮಸ್ತರು ಮನವರಿಕೆ ಮಾಡಿಸಿದರೂ, ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಎಚ್ಚರಿಸಿದರು.
ಆಗಿರುವ ಕಳಪೆ ಕಾಮಗಾರಿ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಮತ್ತು 6 ತಿಂಗಳ ಹಿಂದೆ ಕಾಮಗಾರಿ ಮುಗಿದಿದ್ದು, ಸ್ಥಳೀಯ ಗ್ರಾಪಂಗೆ ಹಸ್ತಾಂತರಿಸಲಾಗಿದೆ ಎಂದು ಎಇಇ ಸಮಜಾಯಿಸಿ ನೀಡಿದರು. ಇದಕ್ಕೆ ಒಪ್ಪದ ಸ್ಥಳೀಯರು ಸ್ಥಳೀಯ ಗ್ರಾಪಂ ಅಧ್ಯಕ್ಷ ಎಚ್.ವೈ. ಸತೀಶಗೌಡರನ್ನು ಸ್ಥಳಕ್ಕೆ ಕರೆಸಿ ವಿಚಾರಿಸಿದಾಗ ಗ್ರಾಪಂಗೆ ಇನ್ನು ಹಸ್ತಾಂತರವಾಗಿಲ್ಲ ಎಂದು ಸ್ಪಷ್ಟ ಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ಬಗ್ಗೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದರು.
ಅಳಲು: ಕುಡಿಯುವ ನೀರಿಲ್ಲದೆ ಆಟೋದಿಂದ ನೀರು ತರಬೇಕಾದ ಸ್ಥಿತಿ ಇಲ್ಲಿದೆ. ಮಾತ್ರವಲ್ಲ ಈ ಸಂಬಂಧ ಸ್ಥಳೀಯ ಶಾಸಕ ಮತ್ತು ಸಚಿವ ಕಿಮ್ಮನೆ ರತ್ನಾಕರ್‌ರಿಗೆ ದೂರು ನೀಡಲಾಗಿದೆ. ಆದರೆ ಅಧಿಕಾರಿಗಳು ನೀವು ಏನಾದರೂ ಮಾಡಿಕೊಳ್ಳಿ ಎಂದು ದರ್ಪ ತೋರಿಸುತ್ತಾರೆ ಎಂದು ಅಳಲು ತೋಡಿಕೊಂಡ ಸ್ಥಳೀಯರು ಕಾಮಗಾರಿ ಸಂಬಂಧ ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ಗ್ರಾಪಂ ಸದಸ್ಯ ನಾಗೇಶ್, ಸ್ಥಳೀಯರಾದ ದಾವೂದ್ ಸಾಬ್, ಗಿರಿಧರ್, ಪಕೀರಪ್ಪ, ಗ್ರಾಮದ ಪ್ರಮುಖ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement