ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮ
ಸೊರಬ: ಭಾರತೀಯರ ಭಾವನಾತ್ಮಕ, ಧಾರ್ಮಿಕ ತತ್ಪರತೆ, ಆಧ್ಯಾತ್ಮಿಕ ಚಿಂತನೆಗಳು ಸಮಾಜದ ಆರೋಗ್ಯಕ್ಕೆ ನೆರವಾಗುವಂತಿದ್ದರೆ, ಅವಶ್ಯ ಧರ್ಮಾನಿಷ್ಠ ಪರಿಭಾವನೆಗೆ ಒತ್ತು ನೀಡಬಹುದು ಎಂದು ಇಲ್ಲಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸೇವಾ ಸಮಿತಿ ಸಂಚಾಲಕ ಎಲ್.ಜಿ. ಗುಡ್ಡಪ್ಪ ಹೇಳಿದರು. ಪಟ್ಟಣದ ಮರೂರು ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆಯ ನಿಮಿತ್ತ ಸಾರ್ವಜನಿಕ ಭಕ್ತಾದಿಗಳಿಗೆ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಚಾಲಕ ನಾಗಪ್ಪ ಪೂಜಾರ್, ತಿಪ್ಪೇಶಿ ಮರೂರು, ತುಕಾರಾಂ ಬೊಮ್ಮನಹಳ್ಳಿ, ಪಾಲಾಕ್ಷಿ ಸಹಸ್ರವಳ್ಳಿ, ವಿಜಯ್ ಇತರರು ಇದ್ದರು.
ಆರೋಗ್ಯ ಶಿಬಿರ
ಶಿವಮೊಗ್ಗ: ಮುತ್ತೂಟ್ ಫಿನ್ಕಾರ್ಪ್ ಸಂಸ್ಥೆಯು ವಿನೋಬನಗರ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಮಾ.14 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ. ವಿನೋಬನಗರ ಪೊಲೀಸ್ ಚೌಕಿ ಸಮೀಪದ ಸಂಸ್ಥೆಯ ಶಾಖೆಯಲ್ಲಿ ಶಿಬಿರ ನಡೆಯಲಿದೆ. ಮಾಹಿತಿಗೆ-08182 248071.
ಫೋಟೋ ವಿಡಿಯೋ ಎಕ್ಸ್ಪೋ
ಶಿವಮೊಗ್ಗ: ತಾಲೂಕು ವಿಡಿಯೋ ಮತ್ತು ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮಾ.22 ರಂದು ಫೋಟೋ ವಿಡಿಯೋ ಎಕ್ಸ್ಪೋ ಕಾರ್ಯಕ್ರಮವನ್ನು ನಿಜಲಿಂಗಪ್ಪ ಸಭಾ ಭವನದಲ್ಲಿ ಹಮ್ಮಿಕೊಂಡಿದೆ. ಇದೇ ಸಂದರ್ಭ ಛಾಯಾಚಿತ್ರ ಸ್ಪರ್ಧೆ, ಪ್ರದರ್ಶನ ಮತ್ತು ಬಹುಮಾನ ವಿತರಣೆ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಬಿ.ಎಸ್. ಶಶಿಧರ್ ಉದ್ಘಾಟಿಸುವರು.
ವಿಚಾರ ಸಂಕಿರಣ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಹಾಗೂ ಯುಎಸ್ಎಂಆರ್ ಪ್ರಥಮದರ್ಜೆ ಕಾಲೇಜು ಮಾ.15 ರಂದು ಅಡಕೆಯ ಭವಿಷ್ಯ ಕುರಿತಾಗಿ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿವೆ. ಅಂದು ಬೆಳಗ್ಗೆ 10.15 ಗಂಟೆಗೆ ಕುವೆಂಪು ವಿವಿ ಕುಲಪತಿ ಎಸ್.ಎ. ಬಾರಿ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಡಾ. ಎ.ಎಸ್. ಕುಮಾರಸ್ವಾಮಿ ಮುಖ್ಯ ಭಾಷಣ ಮಾಡುವರು.