ಮೋದಿ ಬಗ್ಗೆ ಸಿದ್ದರಾಮಯ್ಯ ಟೀಕೆ ಹಾಸ್ಯಾಸ್ಪದ
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಜರಾಜ್ ಸಿಎಂ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಟೀಕಿಸಿದ್ದಾರೆ.
ನಗರದಲ್ಲಿ ಮಂಗಳವಾರ ಬಿಜೆಪಿಯ ಚುನಾವಣಾ ನಿರ್ವಹಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಗೋಳಾಡಿಕೊಂಡು ಮೊದಲ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ 3 ಬಾರಿ ಸಿಎಂ ಆಗಿರುವ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿರುವುದು ಸರಿ ಕಾಣುತ್ತಿಲ್ಲ. ಅವರು ಕನಿಷ್ಠ ಒಂದು ಅವಧಿಯ 5 ವರ್ಷ ಮುಖ್ಯಮಂತ್ರಿ ಆಗಿರಲಿ. ಆಮೇಲೆ ಮೋದಿ ಅವರ ಬಗ್ಗೆ ಮಾತನಾಡಲಿ ಎಂದರು.
ಎಲ್ಲರ ಬಣ್ಣ ಬಯಲು: ಜಿಲ್ಲೆಯಲ್ಲಿ ನಾಲ್ವರು ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. ಆದರೆ ಅಭಿವೃದ್ಧಿ ರಾಜಕಾರಣದ ಬಗ್ಗೆ ಚಿಂತಿಸಿದ ಏಕೈಕ ವ್ಯಕ್ತಿ ಬಿ.ಎಸ್. ಯಡಿಯೂರಪ್ಪ. ಹಾಗಾಗಿ, ಬೇರೆ ಎಲ್ಲರ ಬಣ್ಣ ಬಯಲಾಗಿದೆ. ಸಿನಿಮಾದವರ ಬಣ್ಣ ನೋಡಿಯಾದರೂ ಓಟು ಕೊಡಲಿ ಎಂದು ಅವರನ್ನು ಕರೆ ತಂದು ನಿಲ್ಲಿಸುತ್ತಿದ್ದಾರೆ ಎಂದು ಜೆಡಿಎಸ್ ಹೆಸರು ಹೇಳದೇ ಟೀಕಿಸಿದ ಅವರು, ಭ್ರಮೆಗಳ ಮೂಲಕ ನಾಯಕರನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ಜನರ ನಡುವೆಯೇ ಮೂಡಿಬಂದ ನಾಯಕ ಯಡಿಯೂರಪ್ಪ. ಅವರು ಸ್ವಯಂ ನಾಯಕ ಎಂದರು.
ಹೆರಿಗೆ ವಾರ್ಡ್: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಯಾರು ಸ್ಪರ್ಧಿಸುತ್ತಾರೆ ಎಂಬುದೇ ದೊಡ್ಡ ಚರ್ಚೆಯ ವಿಷಯವಾಗುತ್ತಿದೆ. ವಿರೋಧ ಪಕ್ಷಗಳಲ್ಲಿ ಕಣದಿಂದ ಹಿಂದೆ ಸರಿಯುವುದಕ್ಕೆ ಪೈಪೋಟಿ ನಡೆಯುತ್ತಿದೆ ಎಂದು ಆಯನೂರು ಮಂಜುನಾಥ್ ಟೀಕಿಸಿದರು.
ಜೆಡಿಎಸ್ ಅಭ್ಯರ್ಥಿ ಇನ್ನೂ ಲೇಬರ್ ವಾರ್ಡ್ನಿಂದ ಹೊರಗೆ ಬಂದಿಲ್ಲ. 17ರಂದು ಹೊರಬರಬಹುದು ಎಂಬ ನಿರೀಕ್ಷೆ ಇದೆ. ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಹೆರಿಗೆ ವಾರ್ಡ್ನಲ್ಲಿಯೇ ಇದ್ದಾರೆ. ಈ ಬಗ್ಗೆ ತಜ್ಞರು ದೆಹಲಿಯಲ್ಲಿ ಕುಳಿತು ವಿಶೇಷ ಚರ್ಚೆ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಹಿಂದಿನ ಸಾಲು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಲೋಕಸಭೆಯಲ್ಲಿ ರಾಜ್ಯಕ್ಕೆ ಸಂಬಂಧಪಟ್ಟ ಎಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಬಹಿರಂಗಪಡಿಸಲಿ ಎಂದು ಆಯನೂರು ಮಂಜುನಾಥ್ ಸವಾಲೆಸೆದರು.
ಟೀಕೆ: ಎಲ್ಲ ನಾಯಕರು ಮುಂದಿನ ಸಾಲಿನಲ್ಲಿ ಕುಳಿತರೆ ದೇವೇಗೌಡರು ಮಾತ್ರ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ. ಯಾವಾಗ ಬರುತ್ತಾರೋ, ಯಾವಾಗ ಹೋಗುತ್ತಾರೋ ಗೊತ್ತೇ ಆಗುವುದಿಲ್ಲ. ಮಾತನಾಡಲು ಮೂರು ನಿಮಿಷ ಅವಕಾಶ ಪಡೆಯಲು ಕಷ್ಟಪಡುತ್ತಾರೆ. ಇವರು ರಾಜಕಾರಣ ಅಂದ್ರೆ ಮಗ, ಸೊಸೆ, ಮೊಮ್ಮಗ, ಇನ್ನೊಬ್ಬ ಮಗ ಅಂದುಕೊಂಡಿದ್ದಾರೆ ಎಂದು ಟೀಕಿಸಿದರು.
ಸಮಾರಂಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಆರ್.ಕೆ. ಸಿದ್ದರಾಮಣ್ಣ, ಎಂ.ಬಿ. ಭಾನುಪ್ರಕಾಶ್, ಜಿ.ಪಂ. ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮುಖಂಡರಾದ ಗಿರೀಶ್ ಪಟೇಲ್, ಲಕ್ಷ್ಮೀನಾರಾಯಣ್ ಇದ್ದರು.