ನಾಗನಗೌಡ ಸ್ಮರಣಾರ್ಥ ಧೀಮಂತ ಪ್ರಶಸ್ತಿ
ಕ.ಪ್ರ.ವಾರ್ತೆ ಶಿಕಾರಿಪುರ ಮಾ. 13
ಅಪ್ರತಿಮ ಸಂಘಟನಾಕಾರ, ಜನಾನುರಾಗಿ ದಿ. ನಾಗನಗೌಡ ಪಾಟೀಲ್ ಸ್ಮರಣಾರ್ಥ ಪ್ರತಿವರ್ಷ ಧೀಮಂತ ಪ್ರಶಸ್ತಿಯನ್ನು ಹರಿಹರ ಪಂಚಮಸಾಲಿ ಪೀಠದ ವತಿಯಿಂದ ನೀಡುವುದಾಗಿ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಸಿದ್ದಲಿಂಗ ಶ್ರೀ ಹೇಳಿದರು.
ಇತ್ತೀಚೆಗೆ ನಿಧನರಾದ ತಾಲೂಕು ವೀರಶೈವ ಪಂಚಮಸಾಲಿ ಸಮಾಜದ ಕಾರ್ಯಾಧ್ಯಕ್ಷ ದಿ. ನಾಗನಗೌಡ ಪಾಟೀಲ್ ಸ್ವಗ್ರಾಮ ತಾಲೂಕಿನ ನಂದಿಹಳ್ಳಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸಮಾಜ ಸಂಘಟನೆಯ ಸಹಿತ ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿ ಎಲ್ಲಾ ವರ್ಗದ ಜನರ ಜತೆ ಅತ್ಯಂತ ಅನ್ಯೋನ್ಯೋನ್ಯತೆಯಿಂದ ಮಾದರಿಯಾಗಿದ್ದ ದಿ. ನಾಗನಗೌಡ ಉತ್ತಮ ಸಂಘಟನಾಕಾರ. ಇವರ ಸ್ಮರಣಾರ್ಥ ರಾಜ್ಯ ಪಂಚಮಸಾಲಿ ಸಮಾಜದಿಂದ ಧೀಮಂತ ಪ್ರಶಸ್ತಿಯನ್ನು ನೀಡುವ ಮೂಲಕ ಅವರ ಅಪ್ರತಿಮ ಸಂಘಟನೆ, ಆದರ್ಶ, ಮಾರ್ಗದರ್ಶನವನ್ನು ಸಮಾಜ ಸದಾಕಾಲ ಸ್ಮರಿಸುತ್ತದೆ ಎಂದರು.
ವಿಶ್ವಾಸದ ವರ್ತನೆ; ರಾಜ್ಯ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ದಿಂಡೂರ್ ಮಾತನಾಡಿ, ಎಲ್ಲಾ ಸಮಾಜದವರ ಜತೆ ಅತ್ಯಂತ ವಿಶ್ವಾಸದಿಂದ ವರ್ತಿಸಿ ಸ್ನೇಹಮಯ ವ್ಯಕ್ತಿಯಾಗಿದ್ದ ದಿ. ನಾಗನಗೌಡ ರಾಜಕೀಯ ಕ್ಷೇತ್ರದಲ್ಲಿಯೂ ತಮ್ಮದೇ ವರ್ಚಸ್ಸು ಬೆಳೆಸಿಕೊಂಡಿದ್ದರು. ಅವರು ವಿವಿಧ ಪಕ್ಷದ ಮುಖಂಡರ ಜತೆಗಿನ ಅನ್ಯೋನ್ಯತೆ ಅವರಲ್ಲಿನ ನಿಷ್ಕಲ್ಮಷ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದರು.
ಜೆಡಿಎಸ್ ಮುಖಂಡ ಎಚ್.ಟಿ. ಬಳಿಗಾರ್ ಮಾತನಾಡಿ, ಪಕ್ಷದ ಶ್ರೇಯಸ್ಸಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನಾಗನಗೌಡರ ಅಕಾಲಿಕ ನಿಧನದಿಂದ ದೊಡ್ಡ ಆಘಾತವಾಗಿದೆ ಎಂದರು.
ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕ ಸುಭಾಶ್ಚಂದ್ರ ಸ್ಥಾನಿಕ್, ಜಿಪಂ ಮಾಜಿ ಅಧ್ಯಕ್ಷ ಫಕೀರಪ್ಪ, ತಾಲೂಕು ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜಪ್ಪ ಮುದ್ದನಹಳ್ಳಿ, ರುದ್ರಮುನಿ, ಚಂದ್ರಪ್ಪ ಮೆಡ್ಲೇರಿ, ಚಂದ್ರಶೇಖರಪ್ಪ, ಯುವ ಮುಖಂಡ ಬೇಗೂರು ಸಿದ್ದೇಶ್, ಸಿ. ಬಸವರಾಜ್ ಮೊದಲಾದವರು ದಿ.ನಾಗನಗೌಡರ ಜತೆಗಿನ ಒಡನಾಟ ವ್ಯಕ್ತಿತ್ವವನ್ನು ಸ್ಮರಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕುಮಾರಸ್ವಾಮಿ, ಶಾಸಕ ಮಧು ಬಂಗಾರಪ್ಪ ಮತ್ತಿತರ ಗಣ್ಯರು ಕುಟುಂಬದ ಸದಸ್ಯರ ಜತೆ ದೂರವಾಣಿ ಮೂಲಕ ಮಾತನಾಡಿ, ಶೋಕ ವ್ಯಕ್ತಪಡಿಸಿದ್ದಾರೆ.