ಮೋದಿ ಅಲೆ ಕೇವಲ ಮಾಧ್ಯಮ ಸೃಷ್ಟಿ
ಕ.ಪ್ರ.ವಾರ್ತೆ ಸಾಗರ ಮಾ. 13
ಈ ದೇಶದ ಪ್ರಧಾನಿಯಾಗುತ್ತೇನೆ ಎಂದು ನರೇಂದ್ರ ಮೋದಿ ತಿರುಕನ ಕನಸು ಕಾಣುತ್ತಿದ್ದಾರೆ. ದೇಶದ ಇತಿಹಾಸ ತಿಳಿಯದ ಹಾಗೂ ದೇಶಕ್ಕೆ ಏನೂ ಕೊಡುಗೆ ನೀಡದ ಮೋದಿ ಪ್ರಧಾನಿಯ ಕನಸು ಕಾಣುತ್ತಿರುವುದು ಹಾಸ್ಯಾಸ್ಪದ ಎಂದು ಸಚಿವ ಕಿಮ್ಮನೆ ರತ್ನಾಕರ್ ಟೀಕಿಸಿದರು.
ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿ, ದೇಶದ 120 ಕೋಟಿ ಜನರನ್ನು ಪ್ರತಿನಿಧಿಸುವ ಸಮರ್ಥ ವ್ಯಕ್ತಿತ್ವ ನರೇಂದ್ರ ಮೋದಿಗೆ ಇಲ್ಲ. ಧರ್ಮ, ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಬಿಜೆಪಿಗೆ ಜನರು ಮತ ನೀಡಿ ತಪ್ಪು ಮಾಡಬಾರದು. ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದ್ದು, ಮೋದಿ ಅಲೆ ಇದೆ ಎನ್ನುವುದು ಮಾಧ್ಯಮದ ಸೃಷ್ಟಿ ಎಂದು ಅಭಿಪ್ರಾಯಪಟ್ಟರು.
ನೈತಿಕ ಹಕ್ಕಿಲ್ಲ: ಬಿಜೆಪಿಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ. ರಾಜ್ಯ ಕಂಡ ಅತಿ ಭ್ರಷ್ಟ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಶ್ರೀರಾಮುಲು ಅಂಥವರನ್ನು ಪುನಃ ಪಕ್ಷಕ್ಕೆ ತಂದಿರುವ ಬಿಜೆಪಿ ಮುಖಂಡರಿಗೆ ಭ್ರಷ್ಟಾಚಾರ ನಿವಾರಣೆ ಹೆಸರಿನಲ್ಲಿ ಚುನಾವಣೆ ಎದುರಿಸುವ ಹಕ್ಕಿಲ್ಲ. ರಾಜ್ಯದ ಜನರಿಗೆ ಕಾಂಗ್ರೆಸ್ ಪಕ್ಷದ ಆಳ್ವಿಕೆ ಬಗ್ಗೆ ವಿಶ್ವಾಸವಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯಲಿದೆ ಎಂದರು.
ಕೋಮುಗಲಭೆ ಆಗಿಲ್ಲ: ಮಾಜಿ ಸಚಿವ ಕುಮಾರ ಬಂಗಾರಪ್ಪ ಮಾತನಾಡಿ, ರಾಷ್ಟ್ರದಲ್ಲಿ ಯುಪಿಎ-3 ಸರ್ಕಾರ ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟಿತ ಪ್ರಯತ್ನ ಮಾಡಬೇಕು. ಬಿಜೆಪಿ, ಜೆಡಿಎಸ್ ಜನರನ್ನು ಒಡೆದು ಆಳುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸಾಕಷ್ಟು ಕೋಮುಗಲಭೆ ನಡೆದಿದೆ. ಆದರೆ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈತನಕ ಯಾವುದೆ ಕೋಮುಗಲಭೆ ನಡೆದಿಲ್ಲ. ಅಧಿಕಾರಕ್ಕಾಗಿ ಒಂದು ಪಕ್ಷ ತೊರೆದು ಮತ್ತೊಂದು ಪಕ್ಷ ಕಟ್ಟಿ, ಪುನಃ ಅಲ್ಲಿಗೆ ಬಂದು ಗೊಂದಲ ಸೃಷ್ಟಿಸುತ್ತಿರುವ, ಜನರನ್ನು ತಪ್ಪುದಾರಿಗೆ ಎಳೆಯುತ್ತಿರುವ ಬಿಜೆಪಿಗೆ ಮತದಾರರು ಮತ ನೀಡಬಾರದು ಎಂದು ಕರೆ ನೀಡಿದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ, ಪ್ರಫುಲ್ಲಾ ಮಧುಕರ್, ಕರಿಯಣ್ಣ, ಸ್ವಾಮಿರಾವ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ತಾಪಂ ಅಧ್ಯಕ್ಷ ಹರೀಶ್ ಗಂಟೆ, ಉಪಾಧ್ಯಕ್ಷೆ ಗೌರಮ್ಮ, ಜಿಪಂ ಸದಸ್ಯರಾದ ರತ್ನಾಕರ ಹೊನಗೋಡು, ಲಲಿತಾ ನಾರಾಯಣ್, ಸುಮಂಗಲ ರಾಮಕೃಷ್ಣ, ನಗರಸಭೆ ಅಧ್ಯಕ್ಷೆ ಲಲಿತಮ್ಮ, ಉಪಾಧ್ಯಕ್ಷ ಸೈಯದ್ ಇಕ್ಬಾಲ್, ಸದಸ್ಯರಾದ ತೀ.ನ. ಶ್ರೀನಿವಾಸ್, ಸುಂದರಸಿಂಗ್, ಪ್ರಮುಖರಾದ ಕಾಗೋಡು ಅಣ್ಣಪ್ಪ, ಕೆ.ಹೊಳೆಯಪ್ಪ, ಮಕ್ಬೂಲ್ ಅಹ್ಮದ್, ಸಲೀಂ, ಮಲ್ಲಿಕಾರ್ಜುನ ಹಕ್ರೆ, ಈಳಿ ನಾರಾಯಣಪ್ಪ ಹಾಜರಿದ್ದರು.
ಪಟ್ಟಣದ ಕೆಳದಿ ರಸ್ತೆಯ ರಾಣಿ ಚೆನ್ನಮ್ಮಾಜಿ ವೃತ್ತದಿಂದ ಭಾರತ ನಿರ್ಮಾಣ ಪಾದಯಾತ್ರೆಯನ್ನು ನಡೆಸಲಾಯಿತು.