ರಾಜ್ಯಮಟ್ಟದ ವಿಶ್ವೇಶ್ವರಯ್ಯ ಪ್ರಶಸ್ತಿ
ಸಾಗರ: ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ ಹಾಗೂ ಸುರ್ವೆ ಪತ್ರಿಕೆ ಆಶ್ರಯದಲ್ಲಿ ನಡೆದ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಸ್ಪರ್ಧೆಯಲ್ಲಿ ಪತ್ರಕರ್ತ ಜಿ. ನಾಗೇಶ್ ಬರೆದ ಡಾ. ಎಚ್. ಗಣಪತಿಯಪ್ಪನವರ ಹೋರಾಟದ ಹೆಜ್ಜೆ ಕೃತಿಗೆ ರಾಜ್ಯಮಟ್ಟದ ವಿಶ್ವೇಶ್ವರಯ್ಯ ಪ್ರಶಸ್ತಿ ಹಾಗೂ ಬೆಳ್ಳಿ ಪದಕ ಲಭಿಸಿದೆ.
ಮೇ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಅಖಿಲ ಭಾರತ ಕನ್ನಡ ಪತ್ರಿಕಾ ಸಂಪಾದಕರ ಸಮಾವೇಶದಲ್ಲಿ ಪ್ರಶಸ್ತಿ ನೀಡಿ, ಗೌರವಿಸಲಾಗುವುದು.
ಯುಜಿ ಫೆಸ್ಟ್
ಶಿವಮೊಗ್ಗ: ನಗರದ ಜೆಎನ್ಎನ್ಸಿ ಎಂಸಿಎ ವಿಭಾಗದಲ್ಲಿ ಏಪ್ರಿಲ್ 15ರಂದು ರಾಜ್ಯ ಮಟ್ಟದ ಯುಜಿ ಫೆಸ್ಟ್ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಮುಂಬರುವ ಉದ್ಯೋಗಾವಕಾಶಗಳ ಸಂದರ್ಶನಗಳನ್ನು ಸಮರ್ಥವಾಗಿ ಎದುರಿಸುವುದು, ಸ್ಪರ್ಧಾತ್ಮಕ ಪರೀಕ್ಷೆ ಯಶಸ್ವಿಯಾಗಿ ಪಾರು ಮಾಡುವುದು ಮುಂತಾದವುಗಳಿಗೆ ಸಹಕಾರಿಯಾಗುವಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಾದವರಿಗೆ ಆಕರ್ಷಕ ಪಾರಿತೋಷಕಗಳೊಂದಿಗೆ ನಗದು ಬಹುಮಾನ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ಬಿಸಿಎ, ಬಿಎಸ್ಸಿ, ಹಾಗೂ ಬಿಕಾಂ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಅವಕಾಶವಾಗಿದ್ದು, ಸದುಪಯೋಗಪಡೆದುಕೊಳ್ಳುವಂತೆ ಎಂಸಿಎ ವಿಭಾಗದ ನಿರ್ದೇಶಕ ಡಾ. ಅಜಿತ್ ದಂತಿಯವರು ಕೋರಿದ್ದಾರೆ.
ಜಾತ್ರೆ ಯಶಸ್ವಿ: ಧನ್ಯವಾದ ಅರ್ಪಣೆ
ಶಿವಮೊಗ್ಗ: ಪ್ರತಿಷ್ಠಿತ ಕೋಟೆ ಮಾರಿಕಾಂಬ ದೇವಿ ಜಾತ್ರೆಯ ಅಂಗವಾಗಿ ನಡೆದ ರಾಜ್ಯಮಟ್ಟದ ಬಯಲು ಕುಸ್ತಿ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದ್ದು, ಸಹಕರಿಸಿದ ವಿವಿಧ ಸಂಘ- ಸಂಸ್ಥೆಗಳನ್ನು ಕೋಟೆ ಮಾರಿಕಾಂಬ ಸೇವಾ ಸಮಿತಿ ಅಭಿನಂದಿಸಿದೆ. ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿ-ಸಿಬ್ಬಂದಿ, ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ಸಮಿತಿ, ಆರ್ಯವೈಶ್ಯ ಯುವಜನ ಸಂಘ, ಹೋಂ ಗಾರ್ಡ್ಸ್ ಸೇರಿದಂತೆ ವಿವಿಧ ಇಲಾಖೆ, ಸಂಘ- ಸಂಸ್ಥೆಗಳನ್ನು ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್, ಖಜಾಂಚಿ ಎಚ್.ವಿ. ತಿಮ್ಮಪ್ಪ ಮತ್ತು ಕುಸ್ತಿ ಸಂಚಾಲಕ ಎನ್. ಉಮಾಪತಿ ಧನ್ಯವಾದ ಅರ್ಪಿಸಿದ್ದಾರೆ.
ಇಂದು ಪುರಸ್ಕಾರ
ಶಿವಮೊಗ್ಗ: ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಮಾ. 14ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10.30ಕ್ಕೆ ಪ್ರೊ. ಸಿ.ಎನ್.ಆರ್. ರಾವ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಮಲ್ಲಿಕಾ ಘಂಟಿ ಉದ್ಘಾಟಿಸುವರು. ಡಿವಿಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಚ್.ಆರ್. ಶಂಕರನಾರಾಯಣ ಶಾಸ್ತ್ರಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಿ. ಶಕುಂತಲ ಅಧ್ಯಕ್ಷತೆ ವಹಿಸುವರು.
ಉಚಿತ ಕಾರ್ಯಾಗಾರ
ಶಿವಮೊಗ್ಗ: ನಗರದ ಜ್ಞಾನ ಗಂಗೋತ್ರಿ ಐಎಎಸ್ ಕೋಚಿಂಗ್ ಸೆಂಟರ್ ವತಿಯಿಂದ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗೆ ಸಂಬಂಧಿಸಿದಂತೆ ಮಾ. 16ರಂದು ಬೆಳಗ್ಗೆ 10ರಿಂದ ಉಚಿತ ಮಾರ್ಗದರ್ಶನ ಶಿಬಿರ ಏರ್ಪಡಿಸಲಾಗಿದೆ. ಆಸಕ್ತರು ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆ ಕೋರಿದೆ. ಆಸಕ್ತರು ಮೊ. 9902407317ಗೆ ಸಂಪರ್ಕಿಸುವಂತೆ ಸಂಸ್ಥೆಯ ನಿರ್ದೇಶಕ ಸುರೇಶ್ಬಾಬು ಕೋರಿದ್ದಾರೆ.