ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಲಂಬಾಣಿ ಮಹಿಳೆಯರ ಮಾರಾಟ ತಡೆಗೆ ಆಗ್ರಹ

Rashmi Kasaragodu
Updated On : 14 Mar 2014, 11:27 am


ಶಿವಮೊಗ್ಗ: ರಾಜ್ಯದಲ್ಲಿ ಲಂಬಾಣಿ ಜನಾಂಗದ ಹೆಣ್ಣುಮಕ್ಕಳ ಮಾರಾಟ ಘಟನೆಗಳು ಮರುಕಳಿಸುತ್ತಿದ್ದು, ಇದಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಬಂಜಾರ ಹಕ್ಕು ಹೋರಾಟ ಸಮಿತಿಯು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಕಿತ್ತು ತಿನ್ನುವ ಬಡತನದಿಂದ ಹೊರಬರಲಾಗದೆ ಲಕ್ಷಾಂತರ ಬಡ ಲಂಬಾಣಿ ಕುಟುಂಬಗಳು ಜೀವನ ನಿರ್ವಹಣೆಗಾಗಿ ಹೆತ್ತ ಮಕ್ಕಳನ್ನೇ ಮಾರಾಟ ಮಾಡುವ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಕೂಲಿ ಕೆಲಸ ಸಿಗದಿದ್ದಾಗ ದೂರದ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಅಪಘಾತ ಉಂಟಾಗಿ ಸಾವು- ನೋವು ಅನುಭವಿಸುತ್ತಿದ್ದಾರೆ. ಆದರೆ, ಸರ್ಕಾರಗಳು ಇವರತ್ತ ಗಮನ ಹರಿಸಿಲ್ಲ. ರಾಜ್ಯದಲ್ಲಿ 3,351 ತಾಂಡಾಗಳಿದ್ದು, ಲಂಬಾಣಿ ಸಮುದಾಯದ 35 ಲಕ್ಷ ಜನರಿದ್ದಾರೆ. ಇವರನ್ನು ಪರಿಶಿಷ್ಟರ ಜಾತಿಯ ಪಟ್ಟಿಯಲ್ಲಿ ಸೇರಿಸಿದ್ದರೂ ಸಾಂವಿಧಾನಿಕ ಸೌಲಭ್ಯಗಳು ಈ ಜನಾಂಗವನ್ನು ತಲುಪುತ್ತಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಇತ್ತೀಚೆಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊಡದಾಳು ತಾಂಡಾದ ಹೆಣ್ಣು ಮಗುವಿನ ಮಾರಾಟದ ಘಟನೆ ನಡೆದಿದೆ. ಈ ಕುಟುಂಬದ ಮೊದಲ ಮಗು ಕಾಣೆಯಾಗಿ ಮೂರು ವರ್ಷವಾಗಿದೆ. ಉಳಿದ 2 ಮಕ್ಕಳನ್ನು ಸಾಕಲಾಗದೇ ಸಂಬಂಧಿಗಳ ಮನೆಯಲ್ಲಿ ಬಿಟ್ಟಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನು ಸರ್ಕಾರ ಗಮನಿಸುತ್ತಿಲ್ಲ ಎಂದಿದ್ದಾರೆ.
ಮಕ್ಕಳ ಮಾರಾಟ ಪ್ರಕರಣ ನಡೆದಿರುವ ಪ್ರದೇಶದಲ್ಲಿ ಸಮಗ್ರ ತನಿಖೆಗೆ ಸರ್ಕಾರ ಆದೇಶ ನೀಡಬೇಕು.
ಮಕ್ಕಳು ಮತ್ತು ಮಹಿಳೆಯರ ಮಾರಾಟದಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯ್ಕ, ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಭೋಜಾನಾಯ್ಕ, ನಾಗೇಶ್ ನಾಯ್ಕ, ಜಗದೀಶ್ ನಾಯ್ಕ, ನಾನ್ಯಾ ನಾಯ್ಕ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement