ಚುನಾವಣೆ ಹಿನ್ನೆಲೆ: ಕ್ಷೇತ್ರ ನಿಯಂತ್ರಣಕ್ಕೆ ಸಜ್ಜು
ಶಿವಮೊಗ್ಗ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆಯು ಇಡೀ ಕ್ಷೇತ್ರವನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್, ಶಾಂತ-ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆ ನಡೆಸುವ ಉದ್ದೇಶದಿಂದ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದೇವೆ ಎಂದರು.
ಸಾಂಪ್ರದಾಯಿಕ ಚಟುವಟಿಕೆಯಂತೆ ಜಿಲ್ಲೆಯಲ್ಲಿ 189 ಅತಿ ಸೂಕ್ಷ್ಮ ಮತಗಟ್ಟೆ, 282 ಸೂಕ್ಷ್ಮ, 109 ಕ್ಲಿಷ್ಟಕರ ವಾತಾವರಣದಲ್ಲಿರುವ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಇಲ್ಲಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅದೇ ರೀತಿ ಸೆಂಟ್ರಲ್ ಪ್ಯಾರಾ ಮಿಲಿಟರಿ ಫೋರ್ಸ್ ಸದ್ಯವೇ ಆಗಮಿಸುತ್ತಿದ್ದು, ಚೆಕ್ ಪೋಸ್ಟ್ ಡ್ಯೂಟಿ, ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಟ್ರಬಲ್ ಮೇಕರ್ಗಳ ಮೇಲೆ ಕಣ್ಣು: ಚುನಾವಣೆ ಸಂದರ್ಭದಲ್ಲಿ ತೊಂದರೆ ಸೃಷ್ಟಿಸಬಹುದಾದವರನ್ನು ಗುರುತಿಸಲಾಗಿದೆ. ಚುನಾವಣೆ ವೇಳೆ ತೊಂದರೆ ಮಾಡುವುದು, ಗಾಳಿ ಸುದ್ದಿ ಹರಡಿಸುವುದು, ಅಡೆ ತಡ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಅಗತ್ಯ ಕ್ರಮಕೈಗೊಳ್ಳಲಾಗಿದೆ. ನಿಯಮಗಳ ಪ್ರಕಾರ ಬಾಂಡ್ಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 6500 ಗನ್ ಪರ್ಮಿಟ್ ಇದ್ದು, ಈ ವರೆಗೆ 2488 ಗನ್ ಡಿಪಾಸಿಟ್ ಮಾಡಿಕೊಳ್ಳಲಾಗಿದೆ. ಉಳಿದವರು ಸದ್ಯವೇ ಡಿಪಾಸಿಟ್ ಆಗುವ ನಿರೀಕ್ಷೆ ಇದೆ ಎಂದರು.
ಮುಂಜಾಗ್ರತಾ ಉದ್ದೇಶದಿಂದ 671 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಅಗತ್ಯ ಎಚ್ಚರಿಕೆಗಳನ್ನು ನೀಡಲಾಗಿದೆ ಎಂದ ಅವರು, ಯಾರೇ ಆದರೂ ಚುನಾವಣೆ ಸಂಬಂಧ ದೂರುಗಳನ್ನು ನೀಡಿದರೆ, ಜಿಲ್ಲಾ ಚುನಾವಣಾ ಕಂಟ್ರೋಲ್ ರೂಂ ಒಂದಿಗೆ ಸಮಾಲೋಚನೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ. ಹಾಗೆಯೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರಕ್ಷಣಾ ಇಲಾಖೆಯಿಂದ ಒಬ್ಬೊಬ್ಬ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
50 ಸಾವಿರಕ್ಕೆ ದಾಖಲೆ ಇರಬೇಕು
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ವ್ಯಕ್ತಿ 50 ಸಾವಿರಕ್ಕಿಂತ ಹೆಚ್ಚಿನ ಹಣ ಇಟ್ಟುಕೊಂಡು ಓಡಾಡಬೇಕೆಂದರೆ ಆ ಹಣಕ್ಕೆ ಪೂರಕವಾಗಿ ದಾಖಲೆ ಇಟ್ಟುಕೊಂಡಿರಬೇಕಾಗಿರುತ್ತದೆ ಎಂದು ಕೌಶಲೇಂದ್ರ ಕುಮಾರ್ ತಿಳಿಸಿದರು. ದಾಖಲೆ ಇಲ್ಲದೇ ಹೋದರೆ ಪರಿಶೀಲನೆಗೊಳಪಟ್ಟರೆ ವಿಚಾರಣೆಗೊಳಪಡಬೇಕಾಗುತ್ತದೆ. ಹೀಗಾಗಿ ಅಗತ್ಯ ದಾಖಲೆ ಇಟ್ಟುಕೊಂಡರೆ ಒಳಿತು ಎಂದು ತಿಳಿಸಿದರು. ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ಆದರೆ, ಪಾರದರ್ಶಕ ಚುನಾವಣೆ ಹಿನ್ನೆಲೆಯಲ್ಲಿ ಪರಿಶೀಲನೆ ಅನಿವಾರ್ಯ ಎಂದರು.