ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಂಪ್‌ಸೆಟ್ ಅಬ್ಬರ: ನೀರಿಗೆ ಬರ!

Rashmi Kasaragodu
Updated On : 15 Mar 2014, 11:10 am

ಶ್ರೀಪಾದ ಬಿಚ್ಚುಗತ್ತಿ
ಸೊರಬ: ತಾಲೂಕು ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಮಳೆಯ ಸೂಚನೆ ಕಂಡರೂ ಮಳೆ ಬಿದ್ದಿಲ್ಲ. ಅತ್ತ ತಾಪಮಾನ ಏರುತ್ತಿದ್ದು, ಹೋದ ವರ್ಷದ ದಾಖಲೆ ಮುರಿಯುವ ಸಾಧ್ಯತೆಯೂ ಇದೆ.
ಕಳೆದ ವರ್ಷ ಈ ತಿಂಗಳಲ್ಲಿ 34- 40 ಡಿ.ಸೆ. ಅಧಿಕ ಉಷ್ಣತೆ ದಾಖಲಾಗಿತ್ತು. ಸಾಮಾನ್ಯವಾಗಿ ಈ ಹಿಂದೆ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಹೆಚ್ಚೆಂದರೆ 30 ಡಿಗ್ರಿ ಸೆ. ಉಷ್ಣತೆಯೇ ಗರಿಷ್ಠವಾಗಿತ್ತು.
ಉಷ್ಣತೆಯ ಹೆಚ್ಚಳದಿಂದಾಗಿ ಇಲ್ಲಿನ ಬಹುತೇಕ ಕೆರೆ, ಹಳ್ಳ, ನದಿಗಳು ಬತ್ತಲಾರಂಭಿಸಿವೆ. ತೆರೆದ ಮತ್ತು ಕೊಳವೆ ಬಾವಿಯ ನೀರಿನ ಮಟ್ಟ ತೀರಾ ಕುಸಿದಿದೆ. ಕುಡಿಯುವ ನೀರಿನ ಅಭಾವ ಅಧಿಕವಾಗಿದೆ.
ಬೆಳೆಗೆ ಹೆಚ್ಚಿನ ನೀರು: ಇರುವ ಹಳ್ಳ, ಕೆರೆ, ನದಿಗಳಿಗೆ ಪಂಪ್ ಬಳಸಿ ವಾಣಿಜ್ಯ ಬೆಳೆಗೆ ಮುಂದಾಗಿರುವುದು ಇನ್ನಷ್ಟು ಕುಡಿಯುವ ನೀರಿನ ಅಭಾವ ತಲೆದೋರಲು ಕಾರಣವಾಗಿದೆ. ವರದಾ ನದಿಯೂ ಸೇರಿದಂತೆ ದಂಡಾವತಿ ನದಿ, ಉಳಿದ ಸಣ್ಣಪುಟ್ಟ ಹಳ್ಳ, ಕೆರೆಗಳಿಗೆ ಹೀಗೆ ಪಂಪ್ ಬಳಸಿ ನೀರೆತ್ತುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೊಳವೆ ಬಾವಿಗಳಿಗೆ ಮೊರೆ ಹೋಗುವ ಅನಿವಾರ್ಯತೆ ಎದುರಾಗಿದ್ದು, ಈ ಹಿಂದೆ ವಿಫಲ ಎನ್ನುವ ಬೋರ್‌ವೆಲ್‌ಗಳಿಗೆ ಪಂಪ್ ಮೂಲಕ ಅಲ್ಪಸ್ವಲ್ಪ ನೀರು ತೆಗೆಯುವ ಹರಸಾಹಸವೂ ನಡೆದಿದೆ.
ಒಣಗಿದ ವರದಾ: ತಾಲೂಕು ಆಡಳಿತ ಮತ್ತು ಪಪಂ ಕೂಡ ನೀರಿನ ಬವಣೆ ಎದುರಿಸಲು ಸಜ್ಜಾಗಿದ್ದು, ನೀರಿಲ್ಲದ ಕಡೆ ಬೋರ್‌ವೆಲ್ ತೆರೆಯಿರಿ ಎಂದು ಸೂಚಿಸುತ್ತಿದೆ. ಅತ್ಯಂತ ಆತಂಕದ ಸಂಗತಿ ಎಂದರೆ ಪಟ್ಟಣಕ್ಕೆ ಹಾಗೂ ಚಂದ್ರಗುತ್ತಿಗೆ ನೀರು ಒದಗಿಸುವ ವರದಾ ನದಿ ಬಹುತೇಕ ಒಣಗಿದೆ.
ಚಂದ್ರಗುತ್ತಿಗೆ ಸಮೀಪವಿರುವ ಜೋಳದ ಗುಡ್ಡೆಯ ಬಳಿ ವರದಾ ನದಿಗೆ ಅಡ್ಡಲಾಗಿ ಪಿಕ್‌ಅಪ್ ಡ್ಯಾಂ ನಿರ್ಮಿಸಲು ಈ ಹಿಂದೆ ಕೇಂದ್ರ ಸರ್ಕಾರ 5 ಕೋಟಿ ಮಂಜೂರು ಮಾಡಿತ್ತು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಅನುದಾನ ಹೆಚ್ಚಾಗುವುದರಿಂದ ಯೋಜನೆಯ ಅನುದಾನವನ್ನು ರಾಜ್ಯ ಸರ್ಕಾರದ ಮೂಲಕವೆ ಬಿಡುಗಡೆಗೊಳಿಸಬೇಕಿತ್ತು.  ಜಿಪಂ ಈ ಯೋಜನೆ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿಯನ್ನು ಕೂಡ ಸಲ್ಲಿಸಿತ್ತು. ಆದರೂ, ಈವರೆಗೆ ತಾಂತ್ರಿಕ ಕಾರಣಗಳನ್ನೊಡ್ಡಿ ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ. ಕಾಮಗಾರಿ ಕೂಡ ಆರಂಭವಾಗಿಲ್ಲ. ವರ್ಷಕ್ಕೊಮ್ಮೆ ಮರಳು ಚೀಲ ಹಾಕಿ ತಾತ್ಕಾಲಿಕ ಒಡ್ಡು ಕಟ್ಟಿಕೊಳ್ಳಲಾಗುತ್ತದೆ. ಕುಡಿಯುವ ನೀರಿಗಾಗಿ ಪರದಾಟ ಏರ್ಪಟ್ಟಿದ್ದರೂ ನದಿಯ ಒಂದು ಪಾತ್ರದಲ್ಲಿನ ನೀರನ್ನು ಮಿತಿಯಿಲ್ಲದೆ ಕೃಷಿಗೆ ಬಳಸಲಾಗುತ್ತಿದೆ. ಅತಿ ಹೆಚ್ಚು ಅಶ್ವಶಕ್ತಿಯುಳ್ಳ ಮೋಟಾರ್ ಬಳಸಿ ನೀರೆತ್ತುತ್ತಿರುವುದರಿಂದ ನದಿ ಶೀಘ್ರ ಬತ್ತುವಂತಾಗಿದೆ.
ಸಂಚಕಾರ: ಕುಡಿಯುವ ನೀರಿಗಾಗಿ ಕಟ್ಟಿರುವ ತಾತ್ಕಾಲಿಕ ಒಡ್ಡಿನ ಬಳಿಯೆ ಸುಮಾರು 10 ಕ್ಕಿಂತಲೂ ಅಧಿಕ ಪಂಪ್‌ಸೆಟ್‌ಗಳು ಬೇಸಿಗೆ ಬೆಳೆಗಾಗಿ ನೀರು ಹೀರುತ್ತಿವೆ. ಈ ಜಾಗದಿಂದ ಸುಮಾರು 100 ಮೀ. ವ್ಯಾಪ್ತಿಯಲ್ಲಿ ನೂರಕ್ಕೂ ಅಧಿಕ ಪಂಪ್‌ಸೆಟ್‌ಗಳು ನೀರು ದೋಚುತ್ತಿವೆ. ಈ ಹಿಂದೆ ಕುಡಿಯುವ ನೀರಿದ್ದಲ್ಲಿ ಬೇರೆ ಯಾವುದೇ ಕಾರ್ಯಕ್ಕೆ ಬಳಸಬಾರದು ಎಂದು ಜಿಲ್ಲಾಧಿಕಾರಿಗಳು ಆಜ್ಞಾಪಿಸಿದ್ದರೂ ಕ್ಯಾರೆ ಎನ್ನದ ಸ್ವಾರ್ಥ ಲಾಲಸೆಯುಳ್ಳವರು ಹೀಗೆ ಅಸಂಖ್ಯಾತ ಪಂಪ್‌ಸೆಟ್ ಬಳಸಿ ನೀರನ್ನು ಬರಿದು ಮಾಡುತ್ತಿದ್ದಾರೆ. ಜನ, ಜಾನುವಾರುಗಳ ಕುಡಿಯುವ ನೀರಿಗೂ ಸಂಚಕಾರ ತರುತ್ತಿದ್ದಾರೆ.
ಜನಪ್ರತಿನಿಧಿಗಳಿಗೆ ಇವೆಲ್ಲ ಗೊತ್ತಿದ್ದರೂ ಮತದಾಸೆಯಿಂದ ಚಕಾರ ಎತ್ತುತ್ತಿಲ್ಲ ಎಂಬ ಬೇಸರ ಪಟ್ಟಣ ಹಾಗೂ ಚಂದ್ರಗುತ್ತಿಯ ಜನತೆಯಲ್ಲಿ ಮಡುಗಟ್ಟಿದ್ದು, ಆಡಳಿತ, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುವುದನ್ನು ಬಿಟ್ಟು ಬೇರೇನನ್ನೂ ಮಾಡಲಾರದ ಸ್ಥಿತಿ ತಲುಪಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement