ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮತದಾನ ಹೆಚ್ಚಳಕ್ಕೆ ನಾನಾ ತಂತ್ರ

Rashmi Kasaragodu
Updated On : 15 Mar 2014, 11:12 am

ಶಿವಮೊಗ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಿಸುವ ಗುರಿಯೊಂದಿಗೆ ಜಿಲ್ಲಾ ಚುನಾವಣಾಧಿಕಾರಿಯವರು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಬಗೆಬಗೆಯ ಕಾರ್ಯಕ್ರಮ ರೂಪಿಸಿದ್ದಾರೆ. ಹಾಗೆಯೇ ಚುನಾವಣೆ ಪೂರ್ವಭಾವಿ ಕಾರ್ಯ ಕೈಗೊಳ್ಳಲು ತಂಡ ರಚಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿಪುಲ್ ಬನ್ಸಲ್, ರಾಷ್ಟ್ರೀಯ ಮತದಾರರ ದಿನಾಚರಣೆ ಮೂಲಕ ಜಾಗೃತಿ, ಮತಗಟ್ಟೆಗಳಲ್ಲಿ ಮತಪಟ್ಟಿ ಪರಿಶೀಲನೆ ಹಾಗೂ ನೋಂದಣಿ ಅಭಿಯಾನ, ತಾಲೂಕು ಕಚೇರಿಗಳಲ್ಲಿ, ಸ್ಥಳೀಯ ಸಂಸ್ಥೆ, ಕಚೇರಿಗಳಲ್ಲಿ ಹೆಲ್ಪ್‌ಡೆಸ್ಕ್, ಕಾಲೇಜಿಗಳಲ್ಲಿ ಜಾಗೃತಿ ಕಾರ್ಯಕ್ರಮ. ಹಾಸ್ಟೆಲ್‌ಗಳಲ್ಲಿ ಜಾಗೃತಿ, ಕ್ಯಾಂಪಸ್ ಅಂಬಾಸಿಡರ್ ನೇಮಕ, ಸಂಘ- ಸಂಸ್ಥೆಗಳ ಮೂಲಕ ಜನಾಧಿಕಾರ, ಮತ ಜಾಗೃತಿ ಕಾರ್ಯಕ್ರಮ, ಸ್ಪರ್ಧೆಗಳು, ಹೆದ್ದಾರಿ ಫಲಕಗಳು ಸೇರಿದಂತೆ ವಿವಿಧ ಉಪಕ್ರಮಗಳ ಕುರಿತು ತಿಳಿಸಿದರು.
ಶಿಮುಲ್ ಸಹಕಾರ: ಪ್ರತಿ ದಿನ ಸುಮಾರು 1.30 ಲಕ್ಷ ಪ್ಯಾಕೆಟ್ ಹಾಲು ಶಿಮುಲ್‌ನಿಂದ ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸರಬರಾಜಾಗುತ್ತದೆ. ಇವುಗಳ ಮೇಲೆ ಮತದಾನ ಜಾಗೃತಿ ಘೋಷಣೆಗಳನ್ನು ಅಳವಡಿಸಲು ಶಿಮುಲ್ ಜತೆಗೆ ಮಾತುಕತೆ ನಡೆದಿದೆ ಎಂದು ವಾರ್ತಾಧಿಕಾರಿ ಹಾಗೂ ಎಂಸಿಎಂಸಿ ಸಮಿತಿಯ ಹಿಮಂತರಾಜು ಇದೇ ಸಂದರ್ಭದಲ್ಲಿ ತಿಳಿಸಿದರು.
ಹಾಗೆಯೇ, ರಬ್ಬರ್ ಸ್ಟಾಂಪ್ ಮೂಲಕ ಮತದಾನ ಜಾಗೃತಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರಿ ಕಚೇರಿ, ಅಂಚೆ ಕಚೇರಿ, ಬ್ಯಾಂಕ್‌ಗಳಲ್ಲಿ ಗ್ರಾಹಕರು ಹಾಗೂ ಅರ್ಜಿದಾರರಿಗೆ ನೀಡುವ ದೃಢೀಕರಣದಲ್ಲಿ ನೀವು ಮತದಾನ ಮಾಡಿ, ನಿಮ್ಮವರನ್ನು ಕರೆ ತನ್ನಿ. ಏ.17ರಂದು ಚುನಾವಣೆಯಲ್ಲಿ ಪಾಲ್ಗೊಳ್ಳಿ ಎಂಬ ಘೋಷ ವಾಕ್ಯವಿರುವ ಮೊಹರನ್ನು ಒತ್ತಿರಲಾಗುತ್ತದೆ ಎಂದು ವಿವರಿಸಿದರು.
ಮತ ಯಂತ್ರ ಜಾಗೃತಿ: ಪ್ರತಿ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತದಾನ ಯಂತ್ರದ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು ನಿಗದಿತ ಸ್ಥಳಗಳಲ್ಲಿ ಹಾಜರಿದ್ದು ಮತಯಂತ್ರದ ಬಳಕೆ ಮಾಡುವ ವಿಧಾನದ ಬಗೆಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ವಿಪುಲ್ ತಿಳಿಸಿದರು.
ಹೊಸ ಹೊಸ ಇವಿಎಂಗಳು ಬಂದಿವೆ, ಕಂಟ್ರೋಲ್ ಯೂನಿಟ್ ಸಣ್ಣದಾಗಿದೆ. ಜತೆಗೆ ನನ್ ಆಫ್ ದಿ ಎಬವ್(ನೋಟಾ) ಬಟನ್ ಸೇರಿಕೊಂಡಿದೆ. ಇವೆಲ್ಲದರ ಕುರಿತಂತೆ ಸದ್ಯವೇ ಜಾಗೃತಿ ಮೂಡಿಸಲಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement