ಸಂಕುಚಿತ ಮನಸ್ಸು ಸದೃಢ ಸಮಾಜಕ್ಕೆ ತೊಡಕು
ಸಾಗರ: ಯುವ ಸಮುದಾಯವೇ ದೇಶದ ನಿಜವಾದ ಆಸ್ತಿ. ಆದರೆ ದೇಶ ಕಟ್ಟಬೇಕಾದ ಯುವಜನತೆ ದುಶ್ಚಟದ ದಾಸರಾಗುವ ಜೊತೆಗೆ ಸಂಕುಚಿತವಾದಿಗಳು ಆಗುತ್ತಿರುವುದು ಸದೃಢ ಸಮಾಜ ಕಟ್ಟುವಲ್ಲಿ ತೊಡಕಾಗಿದೆ ಎಂದು ಪ್ರಾಂಶುಪಾಲ ಪ್ರೊ. ಬಿ.ಸಿ. ಶಶಿಧರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಬ್ರಾಹ್ಮಣಕೆಪ್ಪಿಗೆ ಗ್ರಾಮದಲ್ಲಿ ಎಲ್.ಬಿ. ಎಂಡ್ ಎಸ್.ಬಿ.ಎಸ್ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ದೇಶವು ಸದೃಢವಾಗಿ ಬೆಳೆಯಬೇಕೆಂದರೆ ಆ ದೇಶದ ಯುವಜನತೆಯು ಸಮರ್ಪಕವಾದ ಗುರಿಯೊಂದಿಗೆ ಮುನ್ನಡೆದಾಗ ಮಾತ್ರ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಪಟೇಲ್ ಸತ್ಯನಾರಾಯಣ ಭಟ್, ಕಾಲೇಜಿನ ವಿದ್ಯಾರ್ಥಿಗಳ ಬಗ್ಗೆ ಸಮಾಜದಲ್ಲಿ ಹಲವು ಕಾರಣದಿಂದ ಸಕಾರಾತ್ಮಕ ಅಭಿಪ್ರಾಯಗಳಿಲ್ಲ. ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಬದಲಾಗುವ ಮುಖಾಂತರ ಸಮಾಜಕ್ಕೆ ಆಸ್ತಿಯಾಗಬಲ್ಲರು ಎಂದರು.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬ್ರಾಹ್ಮಣ ಕೆಪ್ಪಿಗೆ ಶಾಲಾ ಮಕ್ಕಳಿಂದ ಶಿಬಿರವನ್ನು ಉದ್ಘಾಟಿಸಲಾಯಿತು.
ಉಪನ್ಯಾಸಕ ಶ್ಯಾರೀಸ್, ಕೆ.ಎಲ್. ಮಂಜುನಾಥ್, ರಾಮಚಂದ್ರ ಗೋಳಗೋಡು, ಸಾವಿತ್ರಿ ರತ್ನಾಕರ ಹಾಜರಿದ್ದರು. ಎನ್.ಎಸ್.ಎಸ್. ಅಧಿಕಾರಿ ಗಣಪತಿ ಎಸ್.ಎಂ. ಸ್ವಾಗತಿಸಿದರು. ಶಾಂತರಾಮ ಭಟ್ ವಂದಿಸಿದರು. ಜಿ.ಟಿ. ಸತ್ಯನಾರಾಯಣ ನಿರೂಪಿಸಿದರು.