ಒಂದೇ ರಸ್ತೆಗೆ ಎರಡು ಬಾರಿ ಕಾಮಗಾರಿ!
ಕ.ಪ್ರ.ವಾರ್ತೆ, ಹೊಸನಗರ, ಮಾ.15
ಒಂದೇ ರಸ್ತೆ 6 ತಿಂಗಳೊಳಗೆ ಪ್ರತ್ಯೇಕ ಹೆಡ್ನಲ್ಲಿ ಎರಡು ಕಾಮಗಾರಿ ನಡೆಸಿ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೊಸೂರು (ಸಂಪೇಕಟ್ಟೆ) ಗ್ರಾಪಂ ಮಾಜಿ ಅಧ್ಯಕ್ಷ ಪ್ರಮೋದ್ ಒತ್ತಾಯಿಸಿದ್ದಾರೆ.
ಹೊಸೂರು ಗ್ರಾಪಂ ವ್ಯಾಪ್ತಿಯ ಹೊಸೂರು-ತಗಡ್ಲೆ ರಸ್ತೆಗೆ 6 ತಿಂಗಳ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ 1 ಲಕ್ಷ ವೆಚ್ಚದ ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಅದು ಮಾಸುವ ಮುನ್ನವೇ ಟಾಸ್ಕ್ಪೋರ್ಸ್ ಯೋಜನೆಯಡಿ ಅದೇ ರಸ್ತೆ 1.5 ಲಕ್ಷ ಅನುದಾನವಿಟ್ಟು ಕಾಮಗಾರಿ ನಡೆಸುವ ನಾಟಕ ಮಾಡಿ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
6 ತಿಂಗಳ ಹಿಂದೆ ಚರಂಡಿ ಮಾಡಿ ರಸ್ತೆಗೆ ಮಣ್ಣುವ ಹಾಕುವ ಕೆಲಸವನ್ನು ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗಿದೆ.
ನಂತರ ರಸ್ತೆಗೆ ಜೆಲ್ಲಿ ಬಿಚಾವಣೆ ಮಾಡಿ ಮಳೆಗಾಲದಲ್ಲಿ ಸುಗಮ ಸಂಚಾರಕ್ಕೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು ಮಾತ್ರವಲ್ಲ ಕಾಮಗಾರಿ ನಿರೀಕ್ಷಿಸಿದ್ದರು.
ಆದರೆ ಟಾಸ್ಕ್ಫೋರ್ಸ್ ಯೋಜನೆಯಡಿ ಮೀಸಲಿಟ್ಟ 1.5 ಲಕ್ಷ ಅನುದಾನದಲ್ಲಿ ಮಾಡಿದ ಕೆಲಸವನ್ನೆ ಮತ್ತೆ ಕೆದರುವ ಮೂಲಕ ಕಾಮಗಾರಿ ಮಾಡಿದ ನಾಟಕವಾಡಿದ್ದಾರೆ. ಕೇವಲ 2-3 ಗಂಟೆ ಜೇಸಿಬಿಯಲ್ಲಿ ಕೆಲಸ ಮಾಡಿದ್ದು, ಹಣ ಲೂಟಿ ಮಾಡಲಾಗಿದೆ.
ಜಿಪಂ ಎಂಜನಿಯರಿಂಗ್ ವಿಭಾಗದಲ್ಲಿ ಸದರಿ ಕೆಲಸದ ಬಗ್ಗೆ ಮಾಹಿತಿ ಕೇಳಿದಾಗ 1.5 ಲಕ್ಷ ಕ್ರಿಯಾಯೋಜನೆ ಮಾಡಲಾಗಿದೆ ಆದರೆ ಅಂದಾಜು ಪಟ್ಟಿಯನ್ನಾಗಲಿ, ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿರುವುದಿಲ್ಲ ಎಂಬ ಉತ್ತರ ನೀಡಿದ್ದಾರೆ. ಆದರೆ ಈಗಾಗಲೇ ಕಾಮಗಾರಿ ಮಾಡಿರುವ ನಾಟಕ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುವ ಕಳಪೆ ಕಾಮಗಾರಿ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಮತ್ತು ಕಾಮಗಾರಿ ಬಿಲಲ್ತಡೆ ಹಿಡಿಯುವಂತೆ ಆಗ್ರಹಿಸಿದ್ದಾರೆ.