ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆ ಜೆಡಿಎಸ್ ಅಭ್ಯರ್ಥಿ ಘೋಷಣೆ

Lingaraj Badiger
Updated On : 16 Mar 2014, 12:06 pm

ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.15
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂದು ಮಾ.17ರಂದು ಘೋಷಣೆಯಾಗಲಿದೆ. ಗೀತಾ ಶಿವರಾಜಕುಮಾರ್ ಅವರ ಹೆಸರು ಪ್ರಸ್ತಾಪವಾಗಿದ್ದು, ಅವರು ರಾಜ್ ಕುಮಾರ್ ಕುಟುಂಬದವರೆಂದು ಪ್ರಚಾರ ಮಾಡಬೇಡಿ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ, ಶಾಸಕ ಮಧು ಬಂಗಾರಪ್ಪ ಕೋರಿದ್ದಾರೆ.
ಇವರು ಕಣಕ್ಕಿಳಿಯುವುದಾದರೆ ನನ್ನ ಅಭ್ಯಂತರವಿಲ್ಲ ಎಂದು ಸ್ವತ- ಶಿವರಾಜಕುಮಾರ್ ಅವರೇ ಹೇಳಿದ್ದಾರೆ. ಹಿಂದೂ ಸಮಾಜದಲ್ಲಿ ಪತಿ ಹೇಳಿದ ಮೇಲೆ ಒಪ್ಪಿಗೆ ಇದೆ ಎಂದೇ ಅರ್ಥ. ಇನ್ನೂ ಆಳಕ್ಕಿಳಿಯಲು (ಪಾರ್ವತಮ್ಮ ರಾಜ್ ಕುಮಾರ್ ಅವರ ಒಪ್ಪಿಗೆ ಬಗ್ಗೆ) ನಾನು ಹೋಗುವುದಿಲ್ಲ. ಶಿವರಾಜಕುಮಾರ್ ಅವರು ಎಲ್ಲರ ಒಪ್ಪಿಗೆ ಪಡೆದೇ ಮಾತನಾಡಿದ್ದಾರೆ ಎಂಬುದೇ ನಂಬಿಕೆ ಎಂದು ಅವರು ಹೇಳಿದರು.
ನಾಳೆ ಅಂತಿಮ: ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಬಂಗಾರಪ್ಪ ಅವರ ಕುಟುಂಬದ ಒಬ್ಬರಿಗೆ ಟಿಕೆಟ್ ನೀಡಬೇಕೆಂಬು ಪಕ್ಷ ತೀರ್ಮಾನಿಸಿತ್ತು. ನಾನು, ನಮ್ಮ ತಾಯಿ, ಸಹೋದರಿಯರಾದ ಗೀತಾ ಶಿವರಾಜ್ ಕುಮಾರ್, ಸುಜಾತ ತಿಲಕ್ ಕುಮಾರ್ ಅವರ ಹೆಸರುಗಳು ಪ್ರಸ್ತಾಪದಲ್ಲಿದ್ದವು. ತಾಯಿಯವರಿಗೆ ಅನಾರೋಗ್ಯ ಕಾರಣ ಸ್ಪರ್ಧಿಸುತ್ತಿಲ್ಲ. ಗೀತಾ ಅವರಿಗೆ ಹೆಚ್ಚು ಒಲವು ವ್ಯಕ್ತವಾಗಿದೆ. ಅಂತಿಮ ಘೋಷಣೆ ಮಾ.17ರಂದು ನಡೆಯಲಿದೆ ಎಂದರು.
ಗೀತಾ ಅವರು ಸ್ಪರ್ಧಿಸಿದರೆ ಅವರ ಪತಿ ಶಿವರಾಜ್ ಕುಮಾರ್ ಅವರು ಸಹಜವಾಗಿಯೇ ಅವರ ಪರ ಪ್ರಚಾರಕ್ಕೆ ಬರುತ್ತಾರೆ. ಆದರೆ ಅವರು ಯಾವುದೇ ಪಕ್ಷದ ಸದಸ್ಯರಲ್ಲ. ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದ ಅವರು, ಚಿತ್ರರಂಗದ ಒಂದಿಷ್ಟು ಗೆಳೆಯರೂ ಬರಬಹುದು. ಯಾರ್ಯಾರು ಬರುತ್ತಾರೆ ಎಂಬುದು ಇನ್ನೂ ನಿಗದಿಯಾಗಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು. ಸಹೋದರಿ ಗೀತಾ ಅವರ ರಕ್ತದಲ್ಲಿಯೇ ರಾಜಕೀಯವಿದೆ. ಅವರು ಬಂಗಾರಪ್ಪ ಅವರ ಪುತ್ರಿ. ಅವರು ಬಂಗಾರಪ್ಪ ಅವರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡಲಿದ್ದಾರೆ. ಬಂಗಾರಪ್ಪ ಅವರ ಕೊನೆಯ ಚುನಾವಣೆಯಲ್ಲಿ ಕಂಡ ಸೋಲಿನ ಸೇಡನ್ನು ತೀರಿಸಿಕೊಳ್ಳಬೇಕಾಗಿದೆ ಎಂದರು. ಮಾ.17ರಂದು ಸಮಾವೇಶವು ಮಧ್ಯಾಹ್ನ 3.30ಕ್ಕೆ ಶರಾವತಿ ದಂತವೈದ್ಯಕೀಯ ಕಾಲೇಜಿನ ಆವರಣದಲ್ಲಿ ನಡೆಯುವುದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.


ಈ ಬಾರಿ ಬಿಎಸ್‌ವೈ ಕೋಟೆ ಛಿದ್ರ: ಜಮೀರ್
ಶಿವಮೊಗ್ಗ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಭದ್ರಕೋಟೆಯನ್ನು ಜೆಡಿಎಸ್ ಛಿದ್ರ ಮಾಡಲಿದೆ ಎಂದು ಪಕ್ಷದ ಮುಖಂಡ, ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಶಿವಮೊಗ್ಗದಲ್ಲಿ ಅಭಿವೃದ್ಧಿ ಆಗಿರುವುದಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಅವರು ಅಭಿವೃದ್ಧಿ ಆಗಿದ್ದಾರೆ ಎಂದು ಟೀಕಿಸಿದರು.
ಮುಸ್ಲಿಂ ನಾಯಕರಿಲ್ಲ: ಕಾಂಗ್ರೆಸ್ ಪಕ್ಷದಲ್ಲಿ ಜಾಫರ್ ಷರೀಫ್ ಅವರನ್ನು ಹೊರತುಪಡಿಸಿದರೆ ಮುಸ್ಲಿಂ ಸಮುದಾಯದ ಬೇರೆ ನಾಯಕರನ್ನು ಪಕ್ಷ ಬೆಳೆಸಿಲ್ಲ. ಹಾಲಿ ಅಲ್ಲಿರುವ ಮುಸ್ಲಿಂ ನಾಯಕರೆಲ್ಲಾ ಜೆಡಿಎಸ್ ಮೂಲದವರೇ ಎಂದು ಜಮೀರ್ ಅವರು ಸಿ.ಎಂ. ಇಬ್ರಾಹಿಂ, ರೋಷನ್ ಬೇಗ್ ಸೇರಿದಂತೆ ಹಲವು ನಾಯಕರನ್ನು ಹೆಸರಿಸಿದರು.
ನನಗೂ ಕಾಂಗ್ರೆಸ್ ಆಹ್ವಾನ ನೀಡಿತ್ತು. ಕಾಂಗ್ರೆಸ್‌ನಲ್ಲಿದ್ದಾಗಲೇ ನನ್ನನ್ನು ಅವರು ಗುರುತಿಸಲಿಲ್ಲ. ಈಗ ಕರೆಯುತ್ತಿದ್ದಾರೆ. ನಾನು ಕುಮಾರಸ್ವಾಮಿ ಅವರನ್ನು ಬಿಟ್ಟು ಯಾವ ಕಾರಣಕ್ಕೂ ಬೇರೆ ಹೋಗುವುದಿಲ್ಲ ಎಂದರು.
ಜಾಫರ್ ಷರೀಫ್ ಅವರು ಜೆಡಿಎಸ್ ಪಕ್ಷಕ್ಕೆ ಸೇರಿದರೆ ಆನೆಬಲ ಬರಲಿದೆ. ಮುಸ್ಲಿಂ ಸಮುದಾಯದ ಹೆಚ್ಚು ಮತಗಳು ಪಕ್ಷಕ್ಕೆ ಸಿಗಲಿವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಮುಖಂಡರಾದ ಜಿ. ಮಾದಪ್ಪ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement