ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪದವಿ ಮಾತ್ರದಿಂದ ಉತ್ತಮ ವೈದ್ಯರಾಗಲಾಗದು

Vishwanath S
Updated On : 16 Mar 2014, 1:24 am

ಶಿವಮೊಗ್ಗ: ಭಗವಂತನ ನಂತರದ ಸ್ಥಾನ ವೈದ್ಯನಿಗೆ ಎಂಬ ಮಾತು ನಮ್ಮ ಸಮಾಜದಲ್ಲಿದೆ. ಅಂಥ ಅಪರೂಪದ ಗೌರವದ ವೃತ್ತಿ ಇದು. ವೈದ್ಯ ಪದವಿ ಸ್ವೀಕರಿಸಿದವರು ವೈದ್ಯರಾಗುವ ನಿಟ್ಟಿನಲ್ಲಿ ಒಂದು ಮೈಲಿಗಲ್ಲು ಮುಟ್ಟಿದ್ದಾರೆ. ಇನ್ನೂ ಹೆಚ್ಚಿನ ಅಧ್ಯಯನ ಮಾಡಿ ಸಾಧನೆ ಮಾಡಲಿ ಎಂದು 'ಸುವರ್ಣ ನ್ಯೂಸ್‌' ಹಾಗೂ 'ಕನ್ನಡಪ್ರಭ' ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹೇಳಿದರು.
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಸಿಮ್ಸ್)ಯ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, 'ಡಾಕ್ಟರ್‌ಗಿರಿ ಮಾಡಿದವರೆಲ್ಲರೂ ಒಳ್ಳೆಯ ಡಾಕ್ಟರ್ ಆಗೋದಿಲ್ಲ ಎಂಬುದು ನನ್ನ ಭಾವನೆ. ಉತ್ತಮ ಸಾಧನೆ ಮಾಡಿದವರು ಉತ್ತಮ ವೈದ್ಯರಾಗುತ್ತಾರೆ. ಈ ದಿಕ್ಕಿನಲ್ಲಿ ಭಾವೀ ವೈದ್ಯರು ಸಾಗಬೇಕು. ರೋಗಿಗೆ ಹೊಸ ಬದುಕು ಕೊಡುವ ಪುಣ್ಯದ ವೃತ್ತಿ ಇದಾಗಿದೆ. ಅದೇ ರೀತಿ ನೋವನ್ನು ಅಳಿಸುವ ಶಕ್ತಿ ಇರುವ ವೃತ್ತಿ ಇದು. ಎಂಥದ್ದೇ ಸ್ಥಾನಮಾನದಲ್ಲಿದ್ದವರೂ ವೈದ್ಯರಿಗೆ ತಲೆ ಬಾಗುತ್ತಾರೆ ಎಂದು ಅವರು ಹೇಳಿದರು.
ಈ ಮೊದಲು ಮಾತನಾಡಿದ ಡಾ. ವಿವೇಕ್ ಜವಳಿ ಮಾತನಾಡಿ, ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಜ್ಞಾನ ಮತ್ತು ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳುವ ಮೂಲಕ ವೈದ್ಯರು ಯಶಸ್ಸು ಸಾಧಿಸಬೇಕು. ತಂತ್ರಜ್ಞಾನ ನಿಂತ ನೀರಲ್ಲ. ನಿರಂತರವಾಗಿ ಬದಲಾಗುತ್ತಿರುತ್ತದೆ. ವೈದ್ಯಕೀಯ ಕ್ಷೇತ್ರದ ತಂತ್ರಜ್ಞಾನದಲ್ಲಾಗುತ್ತಿರುವ ಬದಲಾವಣೆಯ ಜ್ಞಾನವನ್ನು ಪಡೆದುಕೊಳ್ಳಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ವೈದ್ಯರು ಗ್ರಾಮೀಣ ಪ್ರದೇಶ ಮತ್ತು ಮಹಾನಗರಗಳಲ್ಲೂ ಕೆಲಸ ಮಾಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಧೃತಿಗೆಡದೆ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಬೇಕು. ವೃತ್ತಿಯೊಂದಿಗೆ ಸಮಾಜಪರ ಚಿಂತನೆ ಅಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆ ನಿರ್ದೇಶಕ ಡಾ. ಎಂ.ವಿ. ಸಾಗರ್ ಇದ್ದರು.
ಇದೇ ಸಂದರ್ಭದಲ್ಲಿ ಎಂಬಿಬಿಎಸ್‌ನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಡಾ. ಎಂ.ಎಸ್. ನಯನಾ ಹಾಗೂ ವಿವಿಧ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಬಿ.ಎಸ್.ಸುಮನ, ಎ.ಎಂ. ಸದಾಶಿವ, ನಿಖಿಲಾ ಥಾಮಸ್, ಅನುಪಮಾ ಶುಕ್ಲಾ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪದವಿ ಪ್ರದಾನ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement