ರಥಯಾತ್ರೆಯಿಂದ ಅನ್ನ, ಬಟ್ಟೆ ಸಮಸ್ಯೆ ನಿವಾರಣೆ ಸಾಧ್ಯವೇ...?
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.15
ರಥಯಾತ್ರೆ ಯಾವ ಪುರುಷಾರ್ಥಕ್ಕೆ..? ಅನ್ನ, ಬಟ್ಟೆ ಸಮಸ್ಯೆ ಪರಿಹರಿಸುತ್ತದೆಯೇ.? ದೇಶದ ಜನಕ್ಕೆ ಇರುವುದಕ್ಕೇ ಜಾಗ ಸಿಗುತ್ತಿಲ್ಲ ಇನ್ನು ರಾಮನಿಗೆ ಸೈಟ್ ಕೊಡಿಸಲು ಹೋಗುತ್ತಾರೆಯೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಬಿಜೆಪಿಯನ್ನು ಲೇವಡಿ ಮಾಡಿದರು.
ನಗರದಲ್ಲಿ ಶನಿವಾರ ಸಂಜೆ ಶಿವಮೊಗ್ಗ ನಗರ ಉತ್ತರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಭಾರತ್ ಯಾತ್ರಾ ಪಾದಯಾತ್ರೆ ನಂತರ ನಡೆದ ಬಹಿರಂಗ ಸಮಾವೇಶದಲ್ಲಿ ಅವರು, ರಾಮ ಭೂ ಮಂಡಲದ ಒಡೆಯ. ಅವನಿಗೆ ಮನೆ, ಸೈಟು ಕೊಡಿಸಲು ಹೋದರೆ ಮನೆ ಇಲ್ಲದ ಜನರ ಕಡೆ ನೋಡುವವರು ಯಾರು ಎಂದು ಪ್ರಶ್ನಿಸಿ, ಮಲೆನಾಡಿನ ಜನರಿಗೆ ಇರುವುದಕ್ಕೆ 2 ಗುಂಟೆ ಜಾಗ ಸಿಗುತ್ತಿಲ್ಲ ಎಂದು ಟೀಕಿಸಿದರು.
ಜೈಲಿನಲ್ಲಿ ಕಳೆದರು: ಬಾಬ್ರಿ ಮಸೀದಿ ಕೆಡವಲು ಅವರು ಡಿಸೆಂಬರ್ 6 ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದು ಅಂಬೇಡ್ಕರ್ ಪರಿನಿರ್ವಾಣ ದಿನ. ಈ ನೆನಪನ್ನು ಅಳಿಸಲೆಂದೇ ಅವರು ಅಂದು ಬಾಬ್ರಿ ಮಸೀದಿಯನ್ನು ಕೆಡವಿದರು ಎಂದರು.
ನರೇಂದ್ರ ಮೋದಿ ನೆಹರು ಬಗ್ಗೆ ಮಾತನಾಡುತ್ತಾರೆ. ಅವರು ಏನು ಮಾಡಿದರು ಎಂದು ಕೇಳುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ನೆಹರೂ ಅವರು ಹದಿನೇಳುವರೆ ವರ್ಷ ಜೈಲಿನಲ್ಲಿ ಕಳೆದರು. ಇಪ್ಪತ್ತು ವರ್ಷ ಮಾತ್ರ ಅವರಿಗೆ ಸಾಂಸಾರಿಕ ಜೀವನ ಸಾಧ್ಯವಾಯಿತು. ಒಂದು ದಿನವೂ ಜೈಲಿಗೆ ಹೋಗದ, ಹೋರಾಟ ಮಾಡದ ಮೋದಿ ಅವರಿಗೆ ನೆಹರು ಬಗ್ಗೆ ಮಾತನಾಡಲು ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ತ್ರಿವೇಣೀ ಸಂಗಮ: ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಹೋದಾಗ ಪಕ್ಷ ಪವಿತ್ರವಾಯಿತು ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದರು. ಅವರು ವಾಪಸ್ಬ್‌ಂದ ನಂತರ ಏನಾಯಿತು ಎಂದು ಈಶ್ವರಪ್ಪನವರೇ ಹೇಳಬೇಕು. ಶ್ರೀರಾಮುಲು ಅವರನ್ನು ಕಟ್ಟಿಕೊಂಡು ಹಾಳಾದೆವು ಎಂದು ಈಶ್ವರಪ್ಪ ಹೇಳಿದ್ದರು. ಈಗ ಅವರೂ ವಾಪಸ್ಬ್‌ಂದಿದ್ದಾರೆ. ಈಗೇನು ತ್ರಿವೇಣಿ ಸಂಗಮ ಆಯಿತೇ ಎಂದು ಪ್ರಶ್ನಿಸಿದರು.
ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಂಜುನಾಥ ಭಂಡಾರಿ, ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್, ಮಾಜಿ ಶಾಸಕ ಕರಿಯಣ್ಣ, ಎಚ್.ಎಂ. ಚಂದ್ರಶೇಖರಪ್ಪ, ಮುಖಂಡರಾದ ರಾಮಚಂದ್ರಪ್ಪ, ಇಸ್ಮಾಯಿಲ್ ಖಾನ್, ಕಲಗೋಡು ರತ್ನಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರೇಶ್, ವಿಶ್ವನಾಥ್ ಕಾಶಿ ಸೇರಿದಂತೆ ಹಲವರು ಇದ್ದರು.