ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪುರಸಭೆ ಅಧ್ಯಕ್ಷೆಯಾಗಿ ಬಿಜೆಪಿಯ ಗೌರಮ್ಮ

Rashmi Kasaragodu
Updated On : 18 Mar 2014, 11:40 am

ಕ.ಪ್ರ.ವಾರ್ತೆ ಟಿ ಶಿಕಾರಿಪುರ ಟಿ ಮಾ.17
ಶಿಕಾರಿಪುರ ಪುರಸಭೆಗೆ ಇದೇ ಪ್ರಥಮ ಬಾರಿಗೆ ದಲಿತ ಮಹಿಳೆ, ಬಿಜೆಪಿಯ ಗೌರಮ್ಮ ಅಧ್ಯಕ್ಷರಾಗಿ ಅವಿರೋಧವಾಗಿ ಸೋಮವಾರ ಆಯ್ಕೆಯಾಗಿದ್ದಾರೆ. ಇದರಿಂದಾಗಿ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಪುರಸಭೆಯ ಅತಂತ್ರ ಪರಿಸ್ಥಿತಿ ಕೊನೆಗೊಂಡು ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ ಅಧಿಕಾರದ ಗದ್ದುಗೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಸೋಮವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪ.ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ (ಹಿಂದಿನ ಕೆಜೆಪಿ) ಅರ್ಹ ಏಕೈಕ ಮಹಿಳೆ ಗೌರಮ್ಮ ರಾಮಯ್ಯ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸೈಯದ್ ಪೀರ್ ಹಾಗೂ ಕಾಂಗ್ರೆಸ್‌ನ ಯಲ್ಲಪ್ಪ ನಾಮಪತ್ರ ಸಲ್ಲಿಸಿದ್ದರು.
ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗೌರಮ್ಮ ಮಾತ್ರ ಅರ್ಹರಾಗಿದ್ದಾರೆ. ಅವರ ಆಯ್ಕೆಯನ್ನು ಚುನಾವಣಾಧಿಕಾರಿ ತಹಸೀಲ್ದಾರ್ ಧರ್ಮೋಜಿರಾವ್ ಅವಿರೋಧ ಎಂದು ಘೋಷಿಸಿದರು.
ಇದರಿಂದಾಗಿ ಇದೇ ಪ್ರಥಮ ಬಾರಿಗೆ ಶಿಕಾರಿಪುರ ಪುರಸಭೆ ಇತಿಹಾಸದಲ್ಲಿ ಪೌರಕಾರ್ಮಿಕರಾಗಿ 12 ವರ್ಷ ಸೇವೆ ಸಲ್ಲಿಸಿ ಇದೀಗ 2ನೇ ಬಾರಿ ಸದಸ್ಯರಾಗಿರುವ ಗೌರಮ್ಮ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸೈಯದ್ ಪೀರ್ ಹಾಗೂ ಕಾಂಗ್ರೆಸ್‌ನ ಯಲ್ಲಪ್ಪ ನಾಮಪತ್ರ ಸಲ್ಲಿಸಿದ್ದು, ಕೈ ಎತ್ತುವ ಮೂಲಕ ನಡೆದ ಮತದಾನದಲ್ಲಿ 16 ಮತ ಪಡೆದ ಸೈಯದ್ ಪೀರ್ ಅವರು 7 ಮತ ಪಡೆದ ಯಲ್ಲಪ್ಪ ಅವರನ್ನು ಮಣಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಕಳೆದ ವರ್ಷ ಮಾ.11 ರಂದು ನಡೆದ ಪುರಸಭಾ ಚುನಾವಣೆಯಲ್ಲಿ ಅಂದಿನ ಕೆಜೆಪಿ ಪಕ್ಷದಿಂದ 23 ಸದಸ್ಯ ಬಲದ ಪುರಸಭೆಗೆ 15 ಸದಸ್ಯರು ಆಯ್ಕೆಯಾಗುವ ಮೂಲಕ ಸ್ಪಷ್ಟ ಬಹುಮತ ಹೊಂದಿದೆ. ಕಾಂಗ್ರೆಸ್‌ನಿಂದ 7 ಸದಸ್ಯರು ಹಾಗೂ ಪಕ್ಷೇತರ ಮಹಿಳೆಯೋರ್ವರು ಆಯ್ಕೆಯಾಗಿದ್ದರು.
ಮನವಿ:  ನೂತನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಘೋಷಿಸಿದ ತಹಸೀಲ್ದಾರ್ ಧರ್ಮೋಜಿರಾವ್ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಭೆ, ಸಮಾರಂಭ, ಮೆರವಣಿಗೆ, ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಶಾಂತ ರೀತಿಯಲ್ಲಿ ವರ್ತಿಸಿ ಸಹಕರಿಸುವಂತೆ ಮನವಿ ಮಾಡಿದರು.
ಪೌರಕಾರ್ಮಿಕರ ಕಾಯಂಗೆ ಆದ್ಯತೆ:  ಆಯ್ಕೆ ಪ್ರಕ್ರಿಯೆಯ ನಂತರದಲ್ಲಿ ಪತ್ರಿಕೆಯ ಜತೆ ಮಾತನಾಡಿದ ನೂತನ ಅಧ್ಯಕ್ಷೆ ಗೌರಮ್ಮ, ರಾಜ್ಯಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿನ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲು ನ್ಯಾಯಾಲಯ ಇತ್ತೀಚೆಗೆ ಆದೇಶಿಸಿದೆ. ಅತ್ಯಂತ ಸಂತಸದ ಸಂಗತಿ. ಈ ದಿಸೆಯಲ್ಲಿ ಖುದ್ದು ಪೌರಕಾರ್ಮಿಕರ ಸಮಸ್ಯೆ, ನೋವನ್ನು ಅನುಭವಿಸಿರುವ ತಾವು ಕೂಡಲೇ ಒತ್ತಡದ ಮೂಲಕ ಸರ್ಕಾರದಿಂದ ಕಾಯಂಗೊಳಿಸಲು ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.
ಅಭಿವೃದ್ಧಿಗೆ ಗಮನ:  ಇದರೊಂದಿಗೆ ಮಾರಣಾಂತಿಕ ಕಾಯಿಲೆಯ ಪೌರಕಾರ್ಮಿಕರಿಗೆ ಅನುಕಂಪದ ಆಧಾರದಲ್ಲಿ ಹುದ್ದೆಯಿಂದ ಬಿಡುಗಡೆಗೊಳಿಸಿ ಕುಟುಂಬದ ಸದಸ್ಯರಿಗೆ ನೀಡಿ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಕಾಯಂಗೊಳಿಸಲು ಶ್ರಮಿಸಲಾಗುವುದು. ಈಗಾಗಲೇ ಸಮಗ್ರ ಶಿಕಾರಿಪುರ ಪಟ್ಟಣವನ್ನು ಶಾಸಕರು ಸಂಪೂರ್ಣ ಅಭಿವೃದ್ಧಿಗೊಳಿಸಿದ್ದು ಸ್ವತಃ ಪೌರಕಾರ್ಮಿಕರಾಗಿ ಮೂಲಭೂತ ಸೌಕರ್ಯ, ಸ್ವಚ್ಛತೆ ಹಾಗೂ ನಿರ್ವಹಣೆಗೆ ಹೆಚ್ಚಿನ ಗಮನಹರಿಸುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸದಸ್ಯರಾದ ವಸಂತಗೌಡ, ಮೋಹನ್, ನಿಜಲಿಂಗಪ್ಪ, ಪರಶುರಾಮ್,ಪಾಲಾಕ್ಷಪ್ಪ, ದೂಪದಹಳ್ಳಿ ರವಿ, ಅಂಗಡಿ ಜಗದೀಶ್, ನಾಗರಾಜಗೌಡ, ರೂಪಕಲಾ ಹೆಗ್ಡೆ, ಫೈರೋಜಾಬಾನು, ರತ್ನಮ್ಮ, ಪದ್ಮಾ, ಪಾರ್ವತಮ್ಮ, ವೀಣಾ, ಗೋಣಿ ಮಾಲತೇಶ್, ಯಲ್ಲಪ್ಪ, ಮಹೇಶ್ ಹಲ್ಮಾರ್, ಶಿವರಾಂ, ಮಧುಸೂದನ್ ಮತ್ತಿತರರು ಅಭಿನಂದಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement