ಭಯ, ಭಕ್ತಿ ಮೂಡಿಸಿದಲ್ಲಿ ಮದ್ಯವ್ಯಸನಕ್ಕೆ ಮುಕ್ತಿ
ಶಿರಾಳಕೊಪ್ಪ: ಯುವಜನಾಂಗಕ್ಕೆ ಸರಿಯಾದ ಸಂಸ್ಕಾರವಿಲ್ಲದೇ, ಕುಡಿತದ ವ್ಯಸನಿಗಳಾಗಿದ್ದಾರೆ. ಅವರನ್ನು ಸರಿದಾರಿಗೆ ತರುವದು ಕಷ್ಟದ ಕೆಲಸ. ಭಯ ಮತ್ತು ಭಕ್ತಿ ಮೂಡಿಸುವಂಥ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದಾಗ ಸರಿದಾರಿಗೆ ತರಲು ಪ್ರಯತ್ನಿಸಬಹುದು ಎಂದು ರಟ್ಟೀಹಳ್ಳಿಯ ಕಬ್ಬಿಣ ಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಕರೆನೀಡಿದರು.
ಶಿರಾಳಕೊಪ್ಪ ಹತ್ತಿರದ ತಳೇಬೈಲ್ ಸರ್ವವ್ಯಾಪಿ ಶನೈಶ್ಚರಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನೆಯಲ್ಲಿ ಮಕ್ಕಳು ಚಿಕ್ಕವರಿದ್ದಾಗ ಧಾರ್ಮಿಕ ಸಂಸ್ಕಾರ ಕೊಡಿ, ಸಂಸ್ಕಾರವಿದ್ದಾಗ ಸಾರ್ಥಕ ಬದುಕು ನಡೆಸಲು ಸಾಧ್ಯಾ ಎಂದರು.
ಮನುಷ್ಯ ಭಕ್ತಿಯಿಂದ ಮತ್ತು ಭಯದಿಂದ ದೇವರ ಒಲುಮೆ ಗಳಿಸಲು ಮುಂದಾಗುತ್ತಾನೆ. ನಾವು ಯಾವುದಾದರೂ ಭಕ್ತಿ ಮಾರ್ಗದಿಂದ ಶ್ರದ್ಧೆಯಿಂದ ಸಾಧನೆ ಮಾಡಿದಾಗ ನಮ್ಮ ಆತ್ಮದ ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯ. ಆಗ ನಮಗೆ ಆನಂದವಾಗುತ್ತದೆ ಎಂದರು.
ಮುಖ್ಯ ಅತಿಥಿ ಮಾಜಿ ಶಾಸಕ ಮಹಲಿಂಗಪ್ಪ ಮಾತನಾಡಿ, ಒಳ್ಳೆಯದಾಗಲಿ ಎಂದು ನಾವು ಒಟ್ಟಿಗೆ ಸೇರಿ ಜಾತ್ರಾ ಮಹೋತ್ಸವ ನಡೆಸುತ್ತೇವೆ. ಸ್ವಾರ್ಥ ಬಿಟ್ಟು ನಾನು ಎಂಬುದನ್ನು ಬದಿಗೊತ್ತಿ ನಾವು ಎಂದು ಎಲ್ಲರೂ ಒಟ್ಟಾಗಿ ದೇವರನ್ನು ನಂಬಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು.
ನಿವೃತ್ತ ಡಿಎಸ್ಪಿ ಎಸ್.ಎಸ್. ಪಾಟೀಲ್ ಮಾತನಾಡಿ, ಆಗಮಿಸುವ ಭಕ್ತರಿಗೆ ಒಳ್ಳೆಯದಾಗಲಿ ಎಂದು ಭಕ್ತರು ಸೇರಿ ಶನೈಶ್ಚರ ನೂತನ ದೇವಾಲಯ ಕಟ್ಟಿಸಲು ಮುಂದೆ ಹೆಜ್ಜೆ ಇಡಲಾಗಿದೆ. ಎಲ್ಲರೂ ಕೈಜೋಡಿಸಿ ಮುಂದಿನ ಜಾತ್ರಾ ಮಹೋತ್ಸವದಲ್ಲಿ ಈ ಕಾರ್ಯ ಪೂರ್ಣಗೊಳಿಸಲು ಸಂಕಲ್ಪ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಧರ್ಮದರ್ಶಿ ಪುಟ್ಟರಾಜಸ್ವಾಮಿಗಳು ಮಾತನಾಡಿ, ಭಕ್ತರ ಸಹಕಾರ ದಿಂದ ಈ ದೇವಸ್ಥಾನದ ಕೆಲಸ ಕಾರ್ಯಗಳು ಸಾಂಗವಾಗಿ ನಡೆಯುತ್ತಿವೆ. ಭಕ್ತರು ಇಲ್ಲಿಗೆ ನೋವಿನಿಂದ ಬಂದು ಹೋಗುವಾಗ ನಗುತ್ತಾ ಹೋಗುತ್ತಿದ್ದಾರೆ. ಆ ಕಾರ್ಯ ನಮಗೆ ಸಮಾಧಾನ ತಂದಿದೆ ಎಂದರು.
ಪ್ರಾರಂಭದಲ್ಲಿ ಪರಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೊರಬದ ನ್ಯಾಯವಾದಿ ನಾಗಪ್ಪ ಮಾಳಗೊಂಡನಕೊಪ್ಪದ ವೀರಣ್ಣ ಪ್ಯಾಟಿ ಹಾಗೂ ಇತರರು ಮಾತನಾಡಿದರು. ದೇವಸ್ಥಾನದ ಸಮಿತಿ ಮತ್ತು ಧಾರ್ಮಿಕ ಕಾರ್ಯಕ್ರಮಕ್ಕೆ ಸಹಕರಿಸುತ್ತಿರುವವರನ್ನು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಶಿಕಾರಿಪುರ ಶಿವಲಿಂಗ ದೇವರು, ಕಾರ್ಯದರ್ಶಿ ಮಲ್ಲೇಶಪ್ಪ ಇನ್ನಿತರ ಪ್ರಮುಖರು ವೇದಿಕೆ ಮೇಲಿದ್ದರು.