ವೈಭವದ ಕೆಂಜಗಾಪುರದ ವೀರಭದ್ರೇಶ್ವರ ರಥೋತ್ಸವ
ತ್ಯಾಗರ್ತಿ: ಸಾಗರ ತಾಲೂಕು ಅನಂದಪುರ ಸಮೀಪದ ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಹೋಳಿ ಹಬ್ಬದ ಸಂದರ್ಭದಲ್ಲಿ ರಥೋತ್ಸವ ನಡೆಸುವ ವಾಡಿಕೆಯಿದ್ದು, ಸೋಮವಾರ ಅತ್ಯಂತ ಸಂಭ್ರಮೋತ್ಸಾಹಗಳಿಂದ ಮಹಾರಥೋತ್ಸವ ನೆರವೇರಿತು.
ದೇವಾಲಯಕ್ಕೆ ನೂತನ ರಥ ನಿರ್ಮಿಸಲಾಗಿದ್ದು, ಹೊಸ ರಥದಲ್ಲಿ ಪ್ರತಿಷ್ಠಾಪಿತ ಸ್ವಾಮಿಯ ಉತ್ಸವ ಮೂರ್ತಿಯನ್ನು ಸಾವಿರಾರು ಭಕ್ತರು ದರ್ಶಿಸಿದರು.
ರಥೋತ್ಸವ ನಿಮಿತ್ತ ಬೆಳಗ್ಗೆ ದೇವರಿಗೆ ರುದ್ರಾಭಿಷೇಕ ಮತ್ತು ಅಷ್ಟೋತ್ತರ ಸೇವೆ ನಡೆಸಲಾಯಿತು. ನಂತರ ಅಚರಣೆ (ಕೆಂಡದಾರ್ಚನೆ) ನೆರವೇರಿತು. ಈ ಸಂದರ್ಭದಲ್ಲಿ ಕುಂಸಿಯ ಬಾಳೆಜೊಪ್ಪದ ವೀರಪುರವಂತರ ಕಲಾ ಸಂಘದ ಸದಸ್ಯರಿಂದ ಅಕರ್ಷಕ ವೀರಗಾಸೆ ಪ್ರದರ್ಶನ ನಡೆಯಿತು. ಬೃಹದಾಕಾರದ ನಾಲ್ಕು ಸಮಾಳ, ತಾಳ ವಾದ್ಯಗಳೊಂದಿಗೆ ಭೋರ್ಗರೆಯುವ ಸದ್ದಿನೊಂದಿಗೆ ವೀರಗಾಸೆ ಪಾತ್ರಧಾರಿಗಳು ಒಡಪು ಹೇಳಿ, ತಾಳಕ್ಕೆ ತಕ್ಕಂತೆ ಕುಣಿದು ಭಕ್ತಿಸೇವೆ ಸಮರ್ಪಿಸಿದರು. ದೇವರ ಉತ್ಸವ ಮೂರ್ತಿಯ ರಥೋತ್ಸವ ನಂತರ ಮಹಾದಾಸೋಹ ನಡೆಸಲಾಯಿತು.