ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಿವಮೊಗ್ಗ: ಗೀತಾ ಶಿವರಾಜ್‌ ಕುಮಾರ್ ಜೆಡಿಎಸ್ ಅಭ್ಯರ್ಥಿ

ಸಾರೇಕೊಪ್ಪ ಬಂಗಾರಪ್ಪ ಅವರ ಪುತ್ರಿ, ಡಾ. ರಾಜ್ ಕುಮಾರ್ ಅವರ ಸೊಸೆ..

Rashmi Kasaragodu
Updated On : 18 Mar 2014, 12:56 pm

ಶಿವಮೊಗ್ಗ: ಸಾರೇಕೊಪ್ಪ ಬಂಗಾರಪ್ಪ ಅವರ ಪುತ್ರಿ, ಡಾ. ರಾಜ್ ಕುಮಾರ್ ಅವರ ಸೊಸೆ, ಚಿತ್ರನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಎಂದು ಅಧಿಕೃತವಾಗಿ ಸೋಮವಾರ ಘೋಷಿಸಲಾಗಿದೆ.

ಅವರ ಸಹೋದರ, ಸೊರಬ ಶಾಸಕ ಮಧು ಬಂಗಾರಪ್ಪ ಅವರು ನಗರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಈ ಘೋಷಣೆ ಮಾಡಿದರು.

ಗೀತಾರಿಗೆ ಬೆಂಬಲ: ಇದಕ್ಕೂ ಮುನ್ನ ನಾನು ಅಭ್ಯರ್ಥಿ ಆಗಬೇಕೇ, ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ ಆಗಬೇಕೇ ಎಂದು ಜನರನ್ನೇ ಪ್ರಶ್ನಿಸಿ, ಜನರು ಗೀತಾ ಶಿವರಾಜ್ ಕುಮಾರ್ ಆಗಲಿ ಎಂದು ಉತ್ತರ ಪಡೆದು ಈ ಘೋಷಣೆ ಮಾಡಿದರು. ನಂತರ ಇದನ್ನು ಅನುಮೋದಿಸಿದ ಪಕ್ಷದ ಮುಖಂಡ ಎಚ್.ಡಿ. ಕುಮಾರಸ್ವಾಮಿ, ತಾಯಿ ಸಮಾನರಾದ ಶಕುಂತಲ ಬಂಗಾರಪ್ಪ ಅವರು ನಿಲ್ಲಬೇಕು ಅನ್ನೋದು ಎಲ್ಲರ ಅಭಿಪ್ರಾಯವಾಗಿತ್ತು.
ಅವರು ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಗೀತಾ ಅವರನ್ನು ಕುಟುಂಬದಲ್ಲಿ ತೀರ್ಮಾನ ಮಾಡಿದ್ದಾರೆ. ಅದನ್ನು ಪಕ್ಷ ಒಪ್ಪಿಕೊಂಡಿದೆ ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪರ್ಧಿಸುತ್ತಿದ್ದು, ಇದೇ ಮೊದಲ ಬಾರಿಗೆ ಡಾ.ರಾಜ್‌ಕುಮಾರ್ ಅವರ ಕುಟುಂಬದ ಸದಸ್ಯರೊಬ್ಬರು ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಸಹಜವಾಗಿಯೇ ಚುನಾವಣಾ ಕಣ ರಂಗೇರಲಿದೆ.
 
ಕಳೆದ ಹಲವಾರು ವರ್ಷಗಳಿಂದ ಯಡಿಯೂರಪ್ಪ ಮತ್ತು ಬಂಗಾರಪ್ಪ ಕುಟುಂಬಗಳ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಶಿವಮೊಗ್ಗ ಜಿಲ್ಲೆ ಸಾಕ್ಷಿಯಾಗಿದೆ.

2008ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಸ್ಪರ್ಧಿಸಿದ್ದ ಬಂಗಾರಪ್ಪ ಅವರು ಪರಾಭವಗೊಂಡಿದ್ದರು. ನಂತರ 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಿದ್ದ ಬಂಗಾರಪ್ಪ ಮತ್ತೆ ಸೋಲು ಅನುಭವಿಸಿದ್ದರು. ತಮ್ಮ ತಂದೆಯ ಈ ಎರಡೂ ಸೋಲಿನ ಸೇಡು ತಿರಿಸಿಕೊಳ್ಳಬೇಕಾದ ಹೊಣೆ ಈಗ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರ ಮೇಲಿದೆ.

24ರಂದು ನಾಮಪತ್ರ: ಗೀತಾ ಶಿವರಾಜ್‌ಕುಮಾರ್ ಅವರು ಮಾ. 24ರಂದು ನಾಮಪತ್ರ ಸಲ್ಲಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement