ಅಧಿಕಾರದ ಆಸೆ ಬಿಟ್ಟು ದುಡಿಯಿರಿ: ಮಂಜುನಾಥ
ಶಿವಮೊಗ್ಗ: ಕಳೆದ 35 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಧಿಕಾರಕ್ಕೆ ಆಸೆ ಪಡದೇ ಪ್ರಾಮಾಣಿಕನಾಗಿ ದುಡಿದಿದ್ದೇನೆ. ಅದರ ಫಲವಾಗಿ ನನಗೆ ಲೋಕಸಭೆ ಅಭ್ಯರ್ಥಿಯಾಗುವ ಗೌರವ ಲಭಿಸಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ನಿಯೋಜಿತ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಚುನಾವಣಾ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ 10-15 ವರ್ಷದಲ್ಲಿ ನಿಮಗೂ ಈ ಗೌರವ ಲಭಿಸಬಹುದು. ಹಾಗಾಗಿ, ಈಗಿನಿಂದಲೇ ಯಾವುದೇ ಅಧಿಕಾರಕ್ಕೆ ಆಸೆ ಪಡೆದೇ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯಿರಿ ಎಂದು ಯುವ ಕಾಂಗ್ರೆಸ್ಸಿಗರಿಗೆ ಸಲಹೆ ನೀಡಿದರು.
ಪಕ್ಷಧ ಸಾಧನೆ ತಿಳಿಸಿ: ಕಾಂಗ್ರೆಸ್ ಪಕ್ಷದಿಂದ ಮಾತ್ರ ಬಡವರಿಗೆ, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ಗೌರವ ಸಿಗುತ್ತದೆ. ಅದನ್ನು ಮತದಾರರಿಗೆ ತಲುಪಿಸಬೇಕು. ನಾವು ಕೇವಲ ವೇದಿಕೆಯಲ್ಲಿ ಭಾಷಣ ಮಾಡಿದರೆ ಸಾಲದು. ಬದಲಾಗಿ ಕಾಂಗ್ರೆಸ್ ಸರ್ಕಾರದ ಸಾಧನೆ ನಮ್ಮ ಪ್ರಣಾಳಿಕೆಗಳನ್ನು ಯುವಜನರಿಗೆ ತಿಳಿಸಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದರು.
ಬಿಎಸ್‌ವೈ ಮಾತ್ರ ಸ್ಪರ್ಧಿ: ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ರಮೇಶ್, ಬಿಜೆಪಿ ಭ್ರಷ್ಟಾಚಾರದಿಂದ ಅಧಿಕಾರ ಕಳೆದುಕೊಂಡಿದೆ. ರಾಜ್ಯಕ್ಕೆ ಅಪಕೀರ್ತಿ ತಂದ ಯಡಿಯೂರಪ್ಪ ಅವರನ್ನು ಸೋಲಿಸಬೇಕು. ಜೆಡಿಎಸ್ ನಮಗೆ ಸ್ಪರ್ಧಿ ಅಲ್ಲ. ಯಡಿಯೂರಪ್ಪರೇ ನಮಗೆ ನೇರ ಸ್ಪರ್ಧಿ. ಸಂಸದ ಬಿ.ವೈ. ರಾಘವೇಂದ್ರ ಅವರು ತಂದೆ ಸಿಎಂ ಆಗಿದ್ದರಿಂದ ಅವರ ಹಿಂದೆ ಓಡಾಡಿಕೊಂಡಿದ್ದರು. ಅವರು ಸೋಲುವ ಭಯ ಇದ್ದುದರಿಂದ ಯಡಿಯೂರಪ್ಪ ಅವರೇ ಸ್ವತಃ ಸ್ಪರ್ಧಿಸುತ್ತಿದ್ದಾರೆ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿ.ಪಂ. ಸದಸ್ಯ ಕಲಗೋಡು ರತ್ನಾಕರ್, ಮಾಜಿ ಶಾಸಕ ಕರಿಯಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ವಿಜಯಲಕ್ಷ್ಮೀ ಸಿ.ಪಾಟೀಲ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್, ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್, ಮುಖಂಡರಾದ ರವಿಕುಮಾರ್, ಕೆ. ರಂಗನಾಥ್ ಮತ್ತಿತರರು ಇದ್ದರು.