ಗೀತಾಗೆ ಜಯದ ಸಾಧ್ಯತೆ ಹೆಚ್ಚು: ಅಪ್ಪಾಜಿ
ಭದ್ರಾವತಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ ಸ್ಪರ್ಧಿಸಿದ್ದು, ಅವರು ಜಯಗಳಿಸುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಶಾಸಕ ಎಂ.ಜೆ. ಅಪ್ಪಾಜಿ ಹೇಳಿದರು.
ಮಂಗಳವಾರ ಪಟ್ಟಣದ ಸುನಂದಾ ಹಾಲ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದಾಗ ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ. ವಿಐಎಸ್‌ಎಲ್ ಗಣಿ ವಿಷಯದಲ್ಲಿ ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಜೂರು ಮಾಡಿದ್ದ ಬಳ್ಳಾರಿ ಜಿಲ್ಲೆಯ ಸಂಡೂರಿನ 140 ಹೆಕ್ಟೇರ್ ಗಣಿ ಪ್ರದೇಶಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡದೆ ವಿಳಂಬ ನೀತಿ ಅನುಸರಿಸಿದವರು ಬಿಎಸ್‌ವೈ ಎಂದರು.
ಖಾಸಗಿ ಗಣಿ ಮಾಲಿಕರೊಂದಿಗೆ ಕೈಜೋಡಿಸಿ ಭದ್ರಾವತಿಯ ಕಾರ್ಮಿಕರಿಗೆ ಮತ್ತು ಜನರಿಗೆ ಅನ್ಯಾಯವೆಸಗಿದ್ದಾರೆ. ಕೇಂದ್ರದಲ್ಲಿ ಅವರ ಪುತ್ರ ಬಿ.ವೈ.ರಾಘವೇಂದ್ರ ಸಂಸದರಾಗಿದ್ದರೂ ವಿಐಎಸ್‌ಎಲ್ ಗಣಿ ವಿಚಾರದಲ್ಲಿ ಅಪ್ಪ ಮಗ ತಲೆ ಕೆಡಿಸಿಕೊಳ್ಳದೆ ನಿರ್ಲಕ್ಷಿಸಿದ್ದಾರೆ ಎಂದರು.
ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಬುಧವಾರ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಜೆಡಿಎಸ್ ಯಾರಿಗೂ ವಿಪ್ ನೀಡದೇ ಅವಿರೋಧವಾಗಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಮುಂದಾಗುವುದು ಎಂದು ಶಾಸಕ ಎಂ.ಜೆ.ಅಪ್ಪಾಜಿ ತಿಳಿಸಿದರು. ಸುದ್ದಿಗೋಷ್ಠಿ ಮಾಜಿ ನಗರಸಭಾ ಸದಸ್ಯ ಕರಿಯಪ್ಪ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಪಂ ಸದಸ್ಯ ಎಸ್. ಕುಮಾರ್, ಪೀರ್ ಷರೀಫ್, ಡಿ.ಕೆ. ರಾಮಕೃಷ್ಣ, ಲೋಕೇಶ್ವರ ರಾವ್ ಮತ್ತು ಡಿ.ಟಿ. ಶ್ರೀಧರ್ ಇದ್ದರು.