ಚಿನ್ನದ ಬೆಳೆ ತೆಗೆದ ರೈತನ ಮಗಳು
ವಿಶೇಷ ವರದಿ
ಶಿವಮೊಗ್ಗ: ರೈತನ ಮಗಳು ಚಿನ್ನದ ಬೆಳೆ ತೆಗೆದಿದ್ದಾಳೆ. ಶಿವಮೊಗ್ಗ ತಾಲೂಕು ರಾಮನಗರ ಗ್ರಾಮದ ಕೃಷಿಕ ಸುರೇಶ್, ಗೀತಾ ದಂಪತಿ ಪುತ್ರಿ ಅರ್ಪಿತಾ ಈ ಬಾರಿಯ ಕುವೆಂಪು ವಿಶ್ವವಿದ್ಯಾಲಯದಲ್ಲಿ ಗರಿಷ್ಠ ಚಿನ್ನದ ಪದಕ ಬಾಚಿದ ವಿದ್ಯಾರ್ಥಿನಿ. ಶಿವಮೊಗ್ಗದ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಯು ನಡೆಸುತ್ತಿರುವ ಕಮಲಾ ನೆಹರು ಮಹಿಳಾ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಅರ್ಪಿತಾ ಅವರು ಕುವೆಂಪು ವಿವಿಯ 24ನೇ ಘಟಿಕೋತ್ಸವದಲ್ಲಿ 5 ಚಿನ್ನದ ಪದಕಗಳಿಗೆ ಕೊರಳೊಡ್ಡುತ್ತಿದ್ದಾರೆ.ಈ ಸಂದರ್ಭ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯೆ ನೀಡಿದ ಅರ್ಪಿತಾ, ಓದಿನಲ್ಲಿ ಆಸಕ್ತಿ, ಸಾಕಷ್ಟು ಪರಿಶ್ರಮ ಹಾಕಿದ್ದೆ. ಆದರೆ, ಚಿನ್ನದ ಪದಕ ಬರುತ್ತದೆಂದು ಯಾವಾಗಲೂ ನಿರೀಕ್ಷಿತ. 5 ಚಿನ್ನದ ಪದಕ ನನ್ನ ಪಾಲಿಗೆ ಅನಿರೀಕ್ಷಿತ ಸುದ್ದಿ. ಈ ಘಳಿಗೆಯಲ್ಲಿ ಖುಷಿಯಾಗುತ್ತಿದೆ ಎಂದು ಚುಟುಕಾಗಿ ಉತ್ತರಿಸಿದರು.
ಹೆಮ್ಮೆ ಎನಿಸುತ್ತಿದೆ: ಕಮಲಾ ನೆಹರು ಕಾಲೇಜಿನ ಬೋಧಕ ವರ್ಗವನ್ನು ನಾನು ಸ್ಮರಿಸಲೇಬೇಕು. ಅವರೆಲ್ಲ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು. ಪೋಷಕರೂ ಸಹ ನನ್ನ ಓದಿಗೆ ಪ್ರೋತ್ಸಾಹ ನೀಡಿದರು, ಚಿನ್ನದ ಪದಕ ಬಂದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ತಿಳಿಸಿದರು.ಮಾರ್ಗದರ್ಶನ: ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸಿನಂತೆ ತಯಾರಿ ನಡೆಸಿದ್ದೇನೆ. ಸಿಎ ಪರೀಕ್ಷೆ ತೆಗೆದುಕೊಳ್ಳುವ ಪೂರ್ವಭಾವಿಯಾಗಿ ಶಿವಮೊಗ್ಗದ ಆಡಿಟರ್ ಎನ್.ಎಲ್. ಪ್ರಸಾದ್ ಅವರಿಂದ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದೇನೆ ಎಂದು ವಿವರಿಸಿದರು.
ಅಗ್ರಸ್ಥಾನದಲ್ಲಿ ಅರ್ಪಿತಾ: ಈ ಬಾರಿ 109 ಸ್ವರ್ಣ ಪದಕ ಹಂಚಿಕೆಯಾಗುತ್ತಿದ್ದು, 67 ವಿದ್ಯಾರ್ಥಿಗಳು ಹಂಚಿಕೆಯಾಗುತ್ತಿದ್ದಾರೆ. ಈ ಪೈಕಿ 51 ವಿದ್ಯಾರ್ಥಿನಿಯರೇ ಸೇರಿರುವುದು ವಿಶೇಷ. ಪದಕ ಪಡೆದ ಪಟ್ಟಿಯಲ್ಲಿ ಗ್ರಾಮೀಣ ಪ್ರತಿಭೆ ಅರ್ಪಿತಾ ಅಗ್ರಸ್ಥಾನದಲ್ಲಿರುವುದು ಈ ಸಾಲಿನ ಘಟಿಕೋತ್ಸವದ ವಿಶೇಷವಾಗಿದೆ.