ತೋಟಕ್ಕೆ ಬೆಂಕಿ
ಸೊರಬ: ತಾಲೂಕಿನ ಹಿರಿಯಾವಲಿ ಗ್ರಾಮದಲ್ಲಿ ಇತ್ತೀಚೆಗೆ ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 50 ಲಕ್ಷ ನಷ್ಟ ಸಂಭವಿಸಿದೆ. ಗ್ರಾಮದ ಸ.ನಂ. 92 ರಲ್ಲಿ ಫಾರೂಕ್ ಇಕ್ಬಾಲ್ ಎಂಬುವರು ಕಳೆದ 3 ವರ್ಷಗಳ ಹಿಂದೆ 11 ಎಕರೆ ತೋಟದಲ್ಲಿ 1600 ರಬ್ಬರ್ ಗಿಡ ಬೆಳೆದಿದ್ದರು. ಪಕ್ಕದ ಅರಣ್ಯಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ಬೆಂಕಿಯ ಕೆನ್ನಾಲಿಗೆ ರಬ್ಬರ್ ತೋಟಕ್ಕೂ ವಿಸ್ತರಿಸಿ, ಬೆಳೆ ಸಂಪೂರ್ಣ ಸುಟ್ಟುಹೋಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ, ಪಕ್ಕದ ಜಮೀನುಗಳಿಗೆ ಬೆಂಕಿ ವಿಸ್ತರಿಸದಂತೆ ನಂದಿಸಿದ್ದಾರೆ.
ಅಹವಾಲು ಸ್ವೀಕಾರ ನಾಳೆ
ಶಿವಮೊಗ್ಗ: ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಅಧಿಕಾರಿಗಳು ಮಾರ್ಚ್ ಮಾಹೆಯ ನಿಗದಿತ ದಿನಾಂಕಗಳಂದು ಜಿಲ್ಲೆಯ ಆಯ್ದ ಗ್ರಾಮ ಪಂಚಾಯಿತಿ ಮತ್ತು ಪ್ರವಾಸಿ ಮಂದಿರಗಳಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಮಾ.20 ರಂದು ಬೆಳಗ್ಗೆ 11 ರಿಂದ 1 ಗಂಟೆವರೆಗೆ ಶಿಕಾರಿಪುರ ಪ್ರವಾಸಿ ಮಂದಿರದಲ್ಲಿ, ಮಧ್ಯಾಹ್ನ 3 ರಿಂದ 5 ರವರೆಗೆ ಸೊರಬ ಪ್ರವಾಸಿ ಮಂದಿರದಲ್ಲಿ ಹಾಜರಿದ್ದು, ಅಹವಾಲುಗಳನ್ನು ಸ್ವೀಕರಿಸುವರು. ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳ ಕುರಿತು ಆಗುತ್ತಿರುವ ಅನಗತ್ಯ ವಿಳಂಬ, ಮತ್ತಿತರ ಸಮಸ್ಯೆಗಳಿದ್ದಲ್ಲಿ ನಿಗದಿತ ದಿನಾಂಕ, ಸಮಯ ಮತ್ತು ಸ್ಥಳಗಳಲ್ಲಿ ಖುದ್ದಾಗಿ ಹಾಜರಿದ್ದು, ದೂರುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಂ.ಪಿ. ನಾಗರಾಜು ತಿಳಿಸಿದ್ದಾರೆ.
ಕಳಪೆ ಔಷಧಿ ಖರೀದಿಸದಂತೆ ಸೂಚನೆ
ಶಿವಮೊಗ್ಗ: ಔಷಧ ನಿಯಂತ್ರಣ ಇಲಾಖೆಯು ಇತ್ತೀಚೆಗೆ ಔಷಧ ಮಾರಾಟ ಸಂಸ್ಥೆಗಳ ತಪಾಸಣೆ ಮಾಡಿ, ಮಾದರಿ ಪಡೆದ ಔಷಧಗಳನ್ನು ವಿಶ್ಲೇಷಿಸಿ, ನಿರ್ಧಿಷ್ಟ ಗುಣಮಟ್ಟ ಹೊಂದಿಲ್ಲದ ಔಷಧಗಳನ್ನು ಗುರುತಿಸಿದೆ. ಸಾರ್ವಜನಿಕರು ಇಲಾಖೆ ಗುರುತಿಸಿದ ಕಳಪೆ ಔಷಧಗಳನ್ನು ಖರೀದಿಸದಂತೆ ಔಷಧ ನಿಯಂತ್ರಕ ರಘುರಾಮ ಭಂಡಾರಿ ತಿಳಿಸಿದ್ದಾರೆ. ಎನ್ಪ್ಲೋಸಿನ್ ಸಿರಪ್, ಫ್ಲೇವರ್ಡ್ ಡಿಸ್ಪರಸಿಬಲ್ ಅಮಾಕ್ಸಿಲಿಸಿನ್ಟ್ರೈಹೈಡ್ರೇಡ್ ಟ್ಯಾಬ್ಲೇಟ್ಸ್, ಪವರ್ಜಿನ್ ಟ್ಯಾಬ್ಲೆಟ್ಸ್, ಕ್ರಿಸ್ಟಾ-ಎ ಟ್ಯಾಬ್ಲೆಟ್ಸ್, ಮೆಡೊಮಾಲ್-650 ಮತ್ತು ರಾಬಿನೆಮ್-ಡಿಎಸ್ಆರ್. ಕ್ಯಾಪ್ಸೋಲ್ಸ್ ಇವುಗಳು ನಿಗದಿತ ಗುಣಮಟ್ಟ ಹೊಂದಿಲ್ಲದಿರುವುದು ತಪಾಸಣೆಯಿಂದ ಗುರುತಿಸಿರುವುದಾಗಿ ಅವರು ತಿಳಿಸಿದ್ದಾರೆ. ಈ ಔಷಧಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕಾರ್ಯವ್ಯಾಪ್ತಿಯ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವಂತೆ ಔಷಧ ನಿಯಂತ್ರಕರು ತಿಳಿಸಿದ್ದಾರೆ.