ಶಿವಸುಬ್ರಮಣ್ಯಸ್ವಾಮಿಗೆ ಸ್ವರ್ಣ ಕಳಶ
ಭದ್ರಾವತಿ: ಭದ್ರಾವತಿ ಹಾಗೂ ತರೀಕೆರೆ ಪಟ್ಟಣಗಳ ನಡುವೆ ಇರುವ ಶಿವಸುಬ್ರಮಣ್ಯಸ್ವಾಮಿ ದೇವಸ್ಥಾನಕ್ಕೆ ಸುಮಾರು 12.5 ಲಕ್ಷ ವೆಚ್ಚದಲ್ಲಿ 19 ಸ್ವರ್ಣ ಖಚಿತ ಕಳಶ ಮಾಡಿಸಿ ತರಿಸಲಾಗಿದೆ.
ಇವುಗಳನ್ನು ಮಂಗಳವಾರ ಪಟ್ಟಣದ ಶಿವಸುಬ್ರಮಣ್ಯಾಶ್ರಮದಲ್ಲಿ ಇರಿಸಿ ಧಾರ್ಮಿಕ ವಿಧಿಗಳಿಗನುಸಾರವಾಗಿ ತವತ್ತಿರು ಸ್ವಾಮಿಗಳು ಪೂಜಾದಿ ಕಾರ್ಯಗಳನ್ನು ನೆರವೇರಿಸಿದರು. ಈ ಕಳಶಗಳನ್ನು ಕುಂಭಕೋಣಂನಲ್ಲಿರುವ ತಿರುಪತಿ ದೇವಸ್ಥಾನದ ಶಿಲ್ಪಿ ಮೀನಾಕ್ಷಿ ಸುಂದರಂ ಹಾಗೂ ಅವರಿಗೆ ಕಳಶಗಳನ್ನು ಭದ್ರಾವತಿಗೆ ತರಲು ಸಹಯೋಗ ನೀಡುತ್ತಿರುವ ಬೊಮ್ಮರಾಜು ತಯಾರು ಮಾಡಿ ಭದ್ರಾವತಿಗೆ ತರುತ್ತಿರುವುದಾಗಿ ಆಶ್ರಮದ ಭಕ್ತರಲ್ಲೊಬ್ಬರಾದ ಆರ್. ಕರುಣಾಮೂರ್ತಿ ತಿಳಿಸಿದರು. ತವತ್ತಿರು ಸ್ವಾಮಿಗಳಿಗೆ ಭಕ್ತರ ಮೇಲೆ ದಯೆತೋರಲು ದೇವರು ಮತ್ತೂ ಹೆಚ್ಚು ಆಯುರಾರೋಗ್ಯ ನೀಡಲಿ ಎಂದು ಕರುಣಾಮೂರ್ತಿ ಹಾರೈಸಿದರು.
ತವತ್ತಿರು ಶ್ರೀ, ಪತ್ರಕರ್ತ ಕಣ್ಣಪ್ಪ, ನಗರಸಭಾ ಸದಸ್ಯ ವಿ. ಕದಿರೇಶ್, ನೀಲಕಂಠನ್, ಎಂ. ವೆಂಕಟೇಶ್, ಮೋಕ್ಷಾನಂದ, ಮಂಜುನಾಥ್, ಎಂ.ಎಲ್. ನಾರಾಯಣಸ್ವಾಮಿ ಸೇರಿದಂತೆ ಹಲವು ಭಕ್ತರು ಹಾಜರಿದ್ದರು