ಅಂತರ್ ಕಾಲೇಜು ಸಾಂಸ್ಕೃತಿಕ ಸ್ಫರ್ಧೆ
ಶಿವಮೊಗ್ಗ: ಹೊಯ್ಸಳ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಮಾ. 20ರಂದು ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯನ್ನು ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿದೆ. ಬೆಳಗ್ಗೆ 10 ಗಂಟೆಗೆ ಸಮಾರಂಭವನ್ನು ಎಕ್ಸ್‌ಚೇಂಜಿಂಗ್ ಪ್ರಧಾನ ವ್ಯವಸ್ಥಾಪಕ ಸುಬ್ರಹ್ಮಣ್ಯ ಬಸವನಹಳ್ಳಿ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಲೆಕ್ಕಪರಿಶೋಧಕ ಕೆ.ವಿ. ವಸಂತಕುಮಾರ್, ಹೊಯ್ಸಳ ಅಕಾಡೆಮಿಯ ಮುಖ್ಯ ಕಾರ್ಯದರ್ಶಿ ಕೆ.ಎನ್. ಚೊಕ್ಕಲಿಂಗಂ, ಖಜಾಂಚಿ ಜೆ.ಎನ್. ಶ್ರೀನಿವಾಸ್ ಉಪಸ್ಥಿತರಿರುವರು. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಲಿಯಂ ಡಿಸೋಜ ಅಧ್ಯಕ್ಷತೆ ವಹಿಸುವರು.
ಪವನಕುಮಾರ್‌ಗೆ ಪ್ರಥಮ ಸ್ಥಾನ
ಸೊರಬ: ತಾಲೂಕು ಹರೀಶಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಎಂ.ಪವನಕುಮಾರ್ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಒಲಿಂಪಿಯಾಡ್ ವಿಜ್ಞಾನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಪೋಷಕರು, ಶಾಲಾ ಶಿಕ್ಷಕ, ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ಹೊಳಲೂರು 66,11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಶಿವಮೊಗ್ಗ- ದಾವಣಗೆರೆ ಮಾರ್ಗದ ನಿರ್ವಹಣಾ ಕಾಮಗಾರಿಯ ನಿಮಿತ್ತ ಹಲವು ಗ್ರಾಮಗಳಲ್ಲಿ ಮಾ. 19ರಿಂದ 25ರವರೆಗೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಅಬ್ಬಲಗೆರೆ, ರತ್ನಾಕರನಗರ, ಚನ್ನಮುಂಬಾಪುರ, ಮತ್ತೋಡು, ಹುಣಸೋಡು, ಬಸವನಗಂಗೂರು, ಬೆಳಲಕಟ್ಟೆ, ಮೇಲಿನ ಹನಸವಾಡಿ, ಹನಸವಾಡಿ, ಗೋಂದಿಚಟ್ನಹಳ್ಳಿ, ಹೊಳಲೂರು, ಕೊಮ್ಮನಾಳು, ಬೋದಿಗೆರೆ, ಕುಂಚೇನಹಳ್ಳಿ, ಬನ್ನಿಕೆರೆ, ಮಡಿಕೆ ಚೀಲೂರು, ಸುತ್ತುಕೋಟೆ, ಹಾಡೋನಹಳ್ಳಿ ಹಾಗೂ ಕೂಡ್ಲಿ, ಕಾಟಿಕೇರಿ, ವೆಂಕಟಾಪುರ, ಹೊಳೆಬೆಳಗಲು, ಭದ್ರಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.
ಬೇಸಿಗೆ ಶಿಬಿರ
ಶಿವಮೊಗ್ಗ: ಜನರೇಶನ್ ನೆಕ್ಸ್ಟ್ ಸಂಸ್ಥೆಯು ಬೇಸಿಗೆ ಶಿಬಿರ ಆಯೋಜಿಸಿದೆ. ಇದರಲ್ಲಿ ಅಬಾಕಸ್ ಮತ್ತು ಬ್ರೇನ್ ಜಿಮ್, ಕ್ಯಾಲಿಗ್ರಫಿ, ಆರ್ಟ್ ಮತ್ತು ಕ್ರಾಫ್ಟ್ ಡ್ರಾಯಿಂಗ್, ಚೆಸ್, ಕೇರಂ ಸೇರಿದಂತೆ ಒಳಾಂಗಣ ಕ್ರೀಡೆಗಳು ಸೇರಿದಂತೆ ಬುದ್ಧಿಪ್ರದಾಯಕ ಆಟ ಆಡಿಸಲಾಗುತ್ತದೆ. ಏಪ್ರಿಲ್ 14ರಿಂದ ಮೇ 14ರವರೆಗೆ ಶಿಬಿರ ನಡೆಯುವುದು. ಮಾಹಿತಿಗೆ ಮೊ. 9731599064 ಸಂಪರ್ಕಿಸಬಹುದು.