ಭದ್ರಾವತಿ ನಗರಸಭೆ ಅಧ್ಯಕ್ಷೆಯಾಗಿ ವಿಶಾಲಾಕ್ಷಿ
ಭದ್ರಾವತಿ: ಬುಧವಾರ ಭದ್ರಾವತಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ 16ನೇ ವಾರ್ಡಿನ ಸದಸ್ಯೆ ವಿಶಾಲಾಕ್ಷಿ ಅಧ್ಯಕ್ಷರಾಗಿ ಹಾಗೂ ಜೆಡಿಎಸ್ ಪಕ್ಷದ 35ನೇ ವಾರ್ಡಿನ ಸದಸ್ಯೆ ಜೆ.ಭಾಗ್ಯ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಉಪವಿಭಾಗಾಧಿಕಾರಿ ಕುಸುಮ ಕುಮಾರಿ ಚುನಾವಣಾಧಿಕಾರಿ ಆಗಿ ಕಾರ್ಯನಿರ್ವಹಿಸಿ ಫಲಿತಾಂಶ ಘೋಷಿಸಿದರು. ಪೌರಾಯುಕ್ತ ಬಿ.ಡಿ. ಬಸವರಾಜಪ್ಪ ಹಾಗೂ ಉಪ ತಹಸೀಲ್ದಾರ್ ಶಿವಕುಮಾರ್ ಸಹ ಉಪಸ್ಥಿತರಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನ 15ನೇ ವಾರ್ಡಿನ ಕೆ.ಎಸ್. ಶಾಂಭವಿ ಮತ್ತು 16ನೇ ವಾರ್ಡಿನ ವಿಶಾಲಾಕ್ಷಿ ಈರ್ವರೂ ನಾಮಪತ್ರ ಸಲ್ಲಿಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ 23ನೇ ವಾರ್ಡಿನ ಮಹಾದೇವಿ ಮತ್ತು 35ನೇ ವಾರ್ಡಿನ ಜೆ.ಭಾಗ್ಯ ಈರ್ವರೂ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ಕುಸುಮ ಕುಮಾರಿ ನಾಮಪತ್ರಿ ಹಿಂತೆಗೆದುಕೊಳ್ಳಲು 5 ನಿಮಿಷ ಕಾಲವಕಾಶ ಘೋಷಿಸಿದಾಗ ಕೆ.ಎಸ್. ಶಾಂಭವಿ ಮತ್ತು ಮಹಾದೇವಿ ತಮ್ಮ ನಾಮಪತ್ರಿಗಳನ್ನು ಹಿಂತೆಗೆದುಕೊಂಡು ವಿಶಾಲಾಕ್ಷಿ, ಜೆ.ಭಾಗ್ಯ ಅವಿರೋಧವಾಗಿ ಕ್ರಮವಾಗಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಲು ಅನುವು ಮಾಡಿಕೊಟ್ಟರು.
ಕಾರ್ರ್ಯೋನ್ಮುಖರಾಗಿ: ನೂತನವಾಗಿ ಚುನಾಯಿತರಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಎಂ.ಜೆ.ಅಪ್ಪಾಜಿ ಜನಮಾನಸದಲ್ಲಿ ಉಳಿಯಬೇಕಾದರೆ ಜನಸಾಮಾನ್ಯರ ಕೆಲಸ ಚೆನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಕಾರ್ಯೋನ್ಮುಖರಾಗಲು ಕರೆ ನೀಡಿದರು.
ಚುನಾವಣೆ ತಡವಾಗಿ ಆದರೂ ಸರ್ಕಾರದ ಆದೇಶದಂತೆ ಇದು ನಡೆಯುತ್ತಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಸದಸ್ಯರು ಕಾರ್ಯನಿರ್ವಹಿಸುವ ಅಗತ್ಯವಿದೆ.
ಚುನಾವಣೆಯಲ್ಲಿ ಮತದಾರರು ನೀಡುವ ಅಧಿಕಾರ ಅವರಿಗೆ ನಾವು ಸೇವೆ ಸಲ್ಲಿಸುವ ಅವಕಾಶವೆಂದು ನಾವು ತಿಳಿಯಬೇಕು. ಒಂದು ವ್ವವಸ್ಥೆಯಲ್ಲಿ ಎಲ್ಲರೊಡನೆ ಹೊಂದಿಕೊಂಡು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಚುನಾಯಿತ ಸದಸ್ಯರು ಹೆಗಲ ಮೇಲಿದೆ ಎಂದರು.
ಸಾರ್ವಜನಿಕರ ಕೆಲಸವಾಗಲಿ: ಸಮಸ್ಯೆಯನ್ನು ನಿಮ್ಮ ಬಳಿಗೆ ತರುವ ಜನರು ಸಮಾಧಾನದಿಂದ ಹಿಂದಿರುಗಿದಾಗ ನೀವು ಯಶಸ್ವಿ ನಾಯಕರಾಗುತ್ತೀರಿ. ಕಾಮಗಾರಿಗಳನ್ನು ನಿಮ್ಮ ನಿಮ್ಮ ವಾರ್ಡುಗಳಲ್ಲಿ ಖುದ್ದಾಗಿ ಪರಿಶೀಲಿಸಿರಿ. ಸರ್ಕಾರದ ಹಣ ಅಪವ್ಯಯ ಆಗಬಾರದು. ಸರ್ಕಾರದಿಂದ ಬರುವ ಹಣ, ಶಾಸಕರ ನಿಧಿ ಮತ್ತಿತರ ಅನುದಾನಗಳಿಂದ ಬರುವ ಸಂಪನ್ಮೂಲಗಳು ಸದ್ಬಳಕೆ ಆಗಬೇಕು. ಆದ್ಯತೆ ಮೇಲೆ ಸಾರ್ವಜನಿಕರ ಕೆಲಸಗಳಾಗಬೇಕು ಎಂದು ಅಪ್ಪಾಜಿ ಈ ಸಂದರ್ಭ ಹಾಜರಿದ್ದ ನಗರಸಭಾ ಸದಸ್ಯರಿಗೆ ತಿಳಿಸಿದರು.
ವಿರೋಧ ಪಕ್ಷಗಳ ಸದಸ್ಯರೂ ಪ್ರಗತಿಯ ಹಾದಿಯಲ್ಲಿ ನಮ್ಮೊಡನೆ ಕೈ ಜೋಡಿಸಿದಲ್ಲಿ ಎಲ್ಲಾ 35 ವಾರ್ಡುಗಳ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಲಾಗುವುದು. 5 ವರ್ಷಗಳಲ್ಲಿ ಭದ್ರಾವತಿ ನಗರವನ್ನು ಸುಂದರ ನಗರವನ್ನಾಗಿಸುವ ವಾಗ್ದಾನ ಮಾಡಿದ್ದೇವೆ. ಇದನ್ನು ನೆನಪಿಟ್ಟುಕೊಂಡು ಸದಸ್ಯರು ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂದು ಅಪ್ಪಾಜಿ ಒತ್ತಿ ನುಡಿದರು.
ಕಾಂಗ್ರೆಸ್ ಪಕ್ಷದ ಲಕ್ಷ್ಮಿದೇವಿ, ಸಕ್ಕೂಬಾಯಿ ಮತ್ತು ಜೆಡಿಎಸ್ನ ವಿದ್ಯಾಶ್ರೀ ಅವರನ್ನು ಉಳಿದು ಮಿಕ್ಕ 32 ಮಂದಿ ಸದಸ್ಯರು ಚುನಾವಣಾ ಸಂದರ್ಭದಲ್ಲಿ ಹಾಜರಿದ್ದರು.