ಸ್ವಚ್ಛತಾ ಸಿಬ್ಬಂದಿಗೆ 10 ಸಾವಿರ ಸಂಬಳ ನೀಡಲು ಆಗ್ರಹ
ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ 150 ಕೆಲಸಗಾರರಿಗೆ ಮಾಸಿಕ ಸಂಬಳವನ್ನು ಕನಿಷ್ಠ 10 ಸಾವಿರ ನೀಡುವಂತೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಮತ್ತು ಅಣ್ಣಾ ಹಜಾರೆ ಹೋರಾಟ ಸಮಿತಿ ಒತ್ತಾಯಿಸಿದೆ.
ಬುಧವಾರ ಕಿಮ್ಸ್ ನಿರ್ದೇಶಕರನ್ನು ಭೇಟಿ ಮಾಡಿದ ಸಂಘಟನೆ ಸದಸ್ಯರು ಮನವಿ ಅರ್ಪಿಸಿದರು.
ಈ ಮೊದಲು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಸುಮಾರು 150 ಸ್ವಚ್ಛತಾ ಸಿಬ್ಬಂದಿ ಕಸ ಹೊಡೆಯುವುದು, ಶೌಚಾಲಯ ಕ್ಲೀನಿಂಗ್, ರೋಗಿಗಳ ಮಲ- ಮೂತ್ರ ಕ್ಲೀನಿಂಗ್ ಈ ರೀತಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಈ ನೌಕರರಿಂದ ರೋಗಿಗಳನ್ನು ಸ್ಥಳಾಂತರಿಸುವುದು ಇಂಡೆಂಟ್ ತರುವುದು ಮತ್ತು ವಾರ್ಡ್ ಕೆಲಸ ಮಾಡಿಸಲಾಗುತ್ತಿದೆ. ಅಲ್ಲದೆ, ಇವರಿಗೆ ವಾರ್ಷಿಕವಾಗಿ ಸಮವಸ್ತ್ರ ಮತ್ತು ಬೂಟ್ಸ್ ಕೆಲವು ಗುತ್ತಿಗೆದಾರರು ನೀಡಿಲ್ಲ. ಈ ನೌಕರರಿಗೆ ಪಿಎಫ್ ಹಣವನ್ನು ಸಿಮ್ಸ್ ಸಂಸ್ಥೆಯ ಲೆಕ್ಕದಲ್ಲಿಯೇ ಕಡಿತಗೊಳಿಸಲು ಕ್ರಮ ಕೈಗೊಳ್ಳಬೇಕು. ಈಗ ಈ ಸ್ವಚ್ಛತಾ ಸಿಬ್ಬಂದಿಗೆ ಶಿವಮೊಗ್ಗ ಮಹಾನಗರ ಪಾಲಿಕೆಯಾಗಿದ್ದರೂ ಕೇವಲ 6154 ವೇತನ ನೀಡುತ್ತಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕೂಡಲೇ ಮಾಸಿಕ ವೇತನವನ್ನು 10 ಸಾವಿರಕ್ಕೇರಿಸಬೇಕು, ಪಿಎಫ್ ಮುಂತಾದ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು. ಮನವಿ ನೀಡುವ ಸಂದರ್ಭದಲ್ಲಿ ಕಲ್ಲೂರು ಮೇಘರಾಜ, ಮಂಜುಳಾದೇವಿ, ಅಶೋಕ್ ಯಾದವ್, ಸುವರ್ಣ ನಾಗರಾಜ್, ಕಡ್ಲೆಕಾಯಿ ಮಂಜುನಾಥ್, ಕೊಣೆಗದ್ದೆ ರಾಜು, ಆನಂದ್, ಮಂಜುಳಾ ಜಿ.ವಿ., ಆಶಾ ಹರೀಶ್, ರಾಜು ಮುಂತಾದವರಿದ್ದರು.