ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಎಸ್‌ವೈ, ಬಿವೈಆರ್ ವಿರುದ್ಧ ಅಪ್ಪಾಜಿ ಭ್ರಷ್ಟಾಚಾರ ಆರೋಪ ಸಲ್ಲ

Rashmi Kasaragodu
Updated On : 21 Mar 2014, 12:02 pm

ಕ.ಪ್ರ.ವಾರ್ತೆ   ಭದ್ರಾವತಿ   ಮಾ. 20
ಚುನಾವಣೆಯ ಸಂದರ್ಭ ಸಾತ್ವಿಕ ಟೀಕೆಗಳು ಸಹಜ. ಆದರೆ, ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ವ್ಯಕ್ತಿಗತವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡಿರುವುದು ಸರಿಯಲ್ಲ ಎಂದು ಮಾಜಿ ಸಿಎಂ ಬಿಎಸ್‌ವೈ ಅವರ ವಿಶೇಷ ಅಧಿಕಾರಿಯಾಗಿದ್ದ ಎಸ್.ಎನ್. ಬಾಲಕೃಷ್ಣ ಟೀಕೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿ ಬೆಂಕಿಪುರ ಆಗಿರುವುದು ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ರಾಘವೇಂದ್ರ ಅವರಿಂದ ಅಲ್ಲ ಮತ್ತು ಅದು ಹಾಲಿ ಶಾಸಕ ಎಂ.ಜೆ.ಅಪ್ಪಾಜಿ ಮತ್ತು ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ಅವರ ವೈಯುಕ್ತಿಕ ಪ್ರತಿಷ್ಠೆಯ ಕದನದಿಂದ ಎಂಬುದು ಭದ್ರಾವತಿಯ ಎಲ್ಲಾ ನಾಗರಿಕರಿಗೂ ತಿಳಿದ ವಿಷಯ ಎಂದರು.
ಒಪ್ಪುವ ವಿಷಯವಲ್ಲ:  ಬಿ.ಎಸ್. ಯಡಿಯೂರಪ್ಪ ವಿಐಎಸ್‌ಎಲ್ ಕಾರ್ಖಾನೆಗೆ ಕಬ್ಬಿಣದ ಅದಿರಿನ ಗಣಿಯನ್ನು ಬಳ್ಳಾರಿ ಜಿಲ್ಲೆಯ ಎನ್‌ಇಬಿ ವಲಯದಲ್ಲಿ ಮಂಜೂರು ಮಾಡಲು ಶಿಫಾರ್ಸು ಮಾಡುವ ಸಮಯದಲ್ಲಿ ಕೇಂದ್ರೀಯ ಸಬಲೀಕರಣ ಸಮಿತಿಯು ಆಕ್ಷೇಪಣೆ ಎತ್ತಿದ್ದರಿಂದ ಅದು ಈಡೇರದೆ ಹೋಯಿತು. ಇದಕ್ಕೆ ಬಿ.ಎಸ್. ಯಡಿಯೂರಪ್ಪ ಅವರಾಗಲೀ ಅಥವಾ ಸಂಸದ ಬಿ.ವೈ. ರಾಘವೇಂದ್ರ ಅವರಾಗಲಿ ಕಾರಣವೆಂದರೆ ಒಪ್ಪುವ ವಿಷಯವಲ್ಲ ಎಂದರು.
ಯಾವ ನ್ಯಾಯ:  ವಿಐಎಸ್‌ಎಲ್ ಕಾರ್ಖಾನೆಯ ಖಾಸಗಿ ಸಹಭಾಗಿತ್ವ ಪ್ರಸ್ತಾವನೆ ಎದುರಾದಾಗ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಂಸದ ಬಿ.ವೈ. ರಾಘವೇಂದ್ರ ಮತ್ತು ಬಿ.ಎಸ್. ಯಡಿಯೂರಪ್ಪ ಅದನ್ನು ತಡೆಗಟ್ಟಲು ಒತ್ತು ನೀಡಿದ್ದರು. ಮೈಸೂರು ಕಾಗದ ಕಾರ್ಖಾನೆಯನ್ನು ಕೈಗಾರಿಕಾ ಮತ್ತು ಆರ್ಥಿಕ ಪುನಾರಚನ ಮಂಡಳಿಗೆ (ಬಿಐಎಫ್‌ಆರ್) ಉಲ್ಲೇಖಿಸಲು ಮುಂದಾದಾಗ ಅದನ್ನು ತಪ್ಪಿಸಲು ಮುಖ್ಯ ಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಒಂದೇ ದಿನದಲ್ಲಿ ಎಂಪಿಎಂ ಕಾರ್ಖಾನೆಗೆ 100 ಕೋಟಿ ಷೇರು ಬಂಡವಾಳ ಮತ್ತು 52 ಕೋಟಿ ನಗದು ಬಿಡುಗಡೆ ಮಾಡಿ ಕಾರ್ಖಾನೆಯ ನಿವ್ವಳ ಆಸ್ತಿಯ ಮೊತ್ತವನ್ನು ಹೆಚ್ಚಿಸಿ ಬಿಐಎಫ್‌ಆರ್ ಉಲ್ಲೇಖನವನ್ನು ತಡೆಗಟ್ಟಿದ್ದರು.
ವಾಸ್ತವತೆ ಗೊತ್ತಿದ್ದೂ ಅಪ್ಪಾಜಿ ಯಡಿಯೂರಪ್ಪ ಮತ್ತು ರಾಘವೇಂದ್ರ ಭದ್ರಾವತಿ ವಾತಾವರಣ ಕಲುಷಿತಗೊಳಿಸುತ್ತಿದ್ದಾರೆಂದು ಹೇಳಿಕೆ ನೀಡುವುದು ಯಾವ ನ್ಯಾಯ ಎಂದು ಬಾಲಕೃಷ್ಣ ಪ್ರಶ್ನಿಸಿದರು.
ಬಿ.ಎಸ್. ಯಡಿಯೂರಪ್ಪ ತಮ್ಮ 3 ವರ್ಷ 3 ತಿಂಗಳ ಅಧಿಕಾರಾವಧಿಯಲ್ಲಿ ಎಂಪಿಎಂ ಕಾರ್ಖಾನೆಗೆ 362 ಕೋಟಿಗಳನ್ನು ಬಿಡುಗಡೆ ಮಾಡಿದ್ದಾರಲ್ಲದೆ ನಿವೃತ್ತಿಯ ವಯೋವುತಿಯನ್ನು 58 ರಿಂದ 60 ವರ್ಷಕ್ಕೆ ಏರಿಸಿದ್ದಾರೆ ಎಂದು ಸಹ ಬಾಲಕೃಷ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಭದ್ರಾವತಿ ಕ್ಷೇತ್ರ ಘಟಕದ ಅಧ್ಯಕ್ಷ ಎಂ.ಮಂಜುನಾಥ್, ಮಾಜಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ, ನಗರಸಭಾ ಸದಸ್ಯ ಕೆ.ಎನ್. ಭೈರಪ್ಪಗೌಡ, ವಿಐಎಸ್‌ಎಲ್ ಕಾರ್ಮಿಕರ ಸಂಘದ ಉಪಾಧ್ಯಕ್ಷ ಎಸ್.ಸಿ.ಓ. ಶ್ರೀನಿವಾಸ್, ಖಜಾಂಚಿ ರೇವಣ್ಣ, ವಿಐಎಸ್‌ಎಲ್ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜೆ.ಎನ್. ನಾಗಭೂಷಣ, ಬಿಜೆಪಿ ಕ್ಷೇತ್ರ ಘಟಕದ ಕಾರ್ಯದರ್ಶಿ ಬಾ.ನಂ. ರಮೇಶ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement