ವಿಜೃಂಭಣೆಯ ಬಳ್ಳಿಗಾವಿ ಕೇದಾರೇಶ್ವರಸ್ವಾಮಿ ರಥೋತ್ಸವ
ಶಿರಾಳಕೊಪ್ಪ: ಐತಿಹಾಸಿಕ ಕ್ಷೇತ್ರ ದೇವಸ್ಥಾನಗಳ ಬೀಡು ಎಂದು ಪ್ರಸಿದ್ಧಿ ಪಡೆದಿರುವ ಬಳ್ಳಿಗಾವಿ ಕೇದಾರೇಶ್ವರ ಸ್ವಾಮಿಯ ರಥೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.
ಗುರುವಾರ ಬೆಳಗ್ಗೆ 10 ಗಂಟೆಗೆ ದೇವಸ್ಥಾನದ ಸಮಿತಿ ಅಧ್ಯಕ್ಷರು ಸಮಿತಿ ಸದಸ್ಯರು ಹಾಗು ಭಕ್ತವೃಂದ ಜನಪದ ವಾದ್ಯ ಮಹಿಳಾ ಡೊಳ್ಳು, ಪುರುಷರ ಡೊಳ್ಳು, ವೀರಗಾಸೆ, ಭಜನೆಯೊಂದಿಗೆ 'ಹರಹರ ಮಹಾದೇವ' ಎಂಬ ಹರ್ಷೋದ್ಘಾರದೊಂದಿಗೆ ಭಕ್ತರು ರಥವನ್ನು ಎಳೆದರು.
ವಿಶೇಷ: ಸಂಪೂರ್ಣ ಗ್ರಾಮವನ್ನು ತಳಿರು ತೋರಣಗಳಿಂದ ರಂಗವಲ್ಲಿ ಹಾಕಿ ಸಿಂಗರಿಸಿದ್ದ ಗ್ರಾಮಸ್ಥರು ರಥೋತ್ಸವದಲ್ಲಿ ಭಾಗವಹಿಸುವದರೊಂದಿಗೆ ತಮ್ಮ ಮನೆ ಮುಂದೆ ಬಂದಾಗ ರಥದ ಗಾಲಿಗಳಿಗೆ ರಸ್ತೆಗೆ ನೀರು ಹಾಕಿ ಬರಮಾಡಿ ಕೊಳ್ಳುತ್ತಿದ್ದರು. ಬಳ್ಳಿಗಾವಿ ಕೇದಾರೇಶ್ವರನಿಗೆ ಸುತ್ತಮುತ್ತಲ ಹಾಗೂ ವಿವಿಧ ಜಿಲ್ಲೆಗಳಲ್ಲಿ ಸಾಕಷ್ಟು ಭಕ್ತರಿದ್ದು, ಅವರೆಲ್ಲ ಭಕ್ತಿಭಾವ ದಿಂದ ರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಭಕ್ತಿಯಾನುಸಾರ ಸೇವೆ ಸಲ್ಲಿಸಿದರು. ಬಳ್ಳಿಗಾವಿ ಕೇದಾರೇಶ್ವರನನ್ನು ದಕ್ಷಿಣ ಕೇದಾರೇಶ್ವರ ಎಂದು ಪ್ರಸಿದ್ಧಿ ಪಡೆದಿದ್ದು, ಈ ಲಿಂಗು ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲಾಗಿದೆ. ಸೂರ್ಯೋದಯವಾದ ಸಂದರ್ಭ ಲಿಂಗುವಿನಲ್ಲಿ ರೇಖೆ ಕಾಣುವುದು ಇಲ್ಲಿಯ ವಿಶೇಷ. ಕಲ್ಲಿನಲ್ಲಿ ನಿರ್ಮಿಸಲಾದ ಭವ್ಯ ದೇವಸ್ಥಾನ ಈ ಭಾಗದ ವಿಶೇಷತೆ ಆಗಿದೆ.
ರಥಕ್ಕೆ ಬಿಗಿ ಕಾವಲು: ಅತಿ ದೊಡ್ಡದಾದ ರಥವಾದ ಕಾರಣ ರಥದ ಗಾಲಿಯನ್ನು ನಿಯಂತ್ರಿಸುತ್ತಾ ಗ್ರಾಮದ ಅನುಭವ ಉಳ್ಳ ದೊಡ್ಡ ಗುಂಪು ರಥದ ಸುತ್ತಲು ಇದೆ. ರಥ ಚಾಲನೆಗೆ ಯಾವುದೇ ತೊಂದರೆ ಅಡ್ಡಿ ಆತಂಕ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಿದರು.
ಈ ಬಾರಿ ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ಅಧಿಕಾರಿಗಳು ತಿಳಿಸಿದ ರೀತಿಯಲ್ಲಿ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಂಜೆ ನಡೆದ ಜಾತ್ರೆಯಲ್ಲಿ ಭಾರಿ ಜನಸ್ತೋಮವಿದೆ. ಪೊಲೀಸರು ಸೂಕ್ತ ನಿಗಾ ವಹಿಸಿ ಯಾವದೇ ಅಹಿತಕರ ಘಟನೆ ನಡೆಯದಂತೆ ಕಾರ್ಯನಿರ್ವಹಿಸಿದರು.