ರಾಜ್ಯದ ಸಮಸ್ಯೆ ಪರಿಹರಿಸುವಲ್ಲಿ ಕೇಂದ್ರ ವಿಫಲ
ಕ.ಪ್ರ.ವಾರ್ತೆ, ಸಾಗರ, ಮಾ. 23
ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ಭಾರತ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುವುದನ್ನು ಕಂಡು ಅಮೇರಿಕಾದಂತಹ ದೇಶವೂ ತನ್ನ ಸ್ನೇಹ ಹಸ್ತ ಚಾಚುತ್ತದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಾಲೂಕಿನ ಆನಂದಪುರದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ, ನರೇಂದ್ರ ಮೋದಿ ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿ ವ್ಯಕ್ತಿತ್ವ ಹೊಂದಿದ್ದಾರೆ. ಎಲ್ಲಾ ವರ್ಗದವರನ್ನೂ ಸಮಾನವಾಗಿ ನೋಡುವ ನರೇಂದ್ರ ಮೋದಿಯವರನ್ನು ಪ್ರಧಾನಿ ಸ್ಥಾನಕ್ಕೆ ಏರಿಸುವ ನಿಟ್ಟಿನಲ್ಲಿ ರಾಜ್ಯದ ಜನರೂ ಉತ್ಸುಕರಾಗಿದ್ದಾರೆ ಎಂದರು.
ಕೇಂದ್ರ ಸರ್ಕಾರ ವಿಫಲ: ರಾಜ್ಯದ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಹಕಾರ ಸಂಘಗಳು ರೈತರಿಗೆ ಕಡಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಿದಂತೆ ರಾಷ್ಟ್ರೀಕೃತ ಬ್ಯಾಂಕುಗಳೂ ಸಹ ಸಾಲ ಸೌಲಭ್ಯ ನೀಡಬೇಕು ಎಂದರು.
ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ವನವಾಸಿಗಳಿಗೆ ಹಕ್ಕುಪತ್ರ ತಕ್ಷಣ ಸಿಗುವಂತೆ ಆಗಬೇಕು. ಮಲೆನಾಡಿನ ಅಡಕೆ ಬೆಳೆಗಾರರ ನೆತ್ತಿಯ ಮೇಲೆ ತೂಗುತ್ತಿರುವ ಅಡಕೆ ಬೆಳೆ ನಿಷೇಧಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಾವು ಸಂಸತ್ನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಯಡಿಯೂರಪ್ಪ ಜಾತ್ಯತೀತ ಮನೋಭಾವದ ವ್ಯಕ್ತಿಯಾಗಿದ್ದಾರೆ. ಇವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ವರ್ಗದ ಮಠಗಳಿಗೆ ಅನುದಾನ ನೀಡುವ ಮೂಲಕ ಧಾರ್ಮಿಕ ಭಾವೈಕ್ಯತೆ ಮೆರೆದಿದ್ದಾರೆ.
ಯಡಿಯೂರಪ್ಪ ಅವರನ್ನು ಹೆಚ್ಚು ಅಂತರದಿಂದ ಗೆಲ್ಲಿಸುವ ಮೂಲಕ ಅವರನ್ನು ಸಂಸದರಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಆನಂದಪುರ ಗ್ರಾಪಂ ಸದಸ್ಯೆ ಶಾಂತಮ್ಮ ಬಿಜೆಪಿ ಸೇರ್ಪಡೆಗೊಂಡರು. ವಿಪ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಪ್ರಮುಖರಾದ ಶರಾವತಿ ಸಿ.ರಾವ್, ಚೇತನರಾಜ್ ಕಣ್ಣೂರು, ಸತೀಶಬಾಬು, ಬಿ.ಆರ್. ಜಯಂತ್, ಟಿ.ಡಿ. ಮೇಘರಾಜ್, ಪುರುಷೋತ್ತಮ, ವ.ಶಂ. ರಾಮಚಂದ್ರ ಭಟ್ ಮೊದಲಾದವರು ಹಾಜರಿದ್ದರು.