ಸನಾತನ ಸಂಸ್ಕೃತಿ ಕಡೆಗಣನೆ ಸಲ್ಲ
ಭದ್ರಾವತಿ: ಭಾರತೀಯರ ಪ್ರಾಚೀನ ವೈದ್ಯಪದ್ಧತಿಯಾದ ಆಯುರ್ವೇದ ಹಾಗೂ ಯೋಗಕ್ಕೆ ವೇದದ ಕಾಲದಿಂದಲೂ ತನ್ನದೇ ಆದ ಮಹತ್ವ ಇದೆ ಎಂದು ಪತಂಜಲಿ ಯೋಗ ಸಮಿತಿಯ ಪ್ರಭಾರಿ ಪ್ರದೀಪ್ ಹೇಳಿದರು.
ಪಟ್ಟಣದ ಪತಂಜಲಿ ಯೋಗ ಸಮಿತಿ ನ್ಯೂಟೌನ್ ಸತ್ಯಸಾಯಿ ಸೇವಾಕ್ಷೇತ್ರದಲ್ಲಿ ಹುತಾತ್ಮರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಯೋಗ ಮಹೋತ್ಸವದಲ್ಲಿ ಮಾತನಾಡಿದರು.
ವಿದೇಶೀ ಹೆಸರಲ್ಲಿ ಪ್ರಚಾರ; ಭಾರತೀಯರ ಸನಾತನ ಸಂಸ್ಕೃತಿ ಪರಂಪರೆ ಬಗ್ಗೆ ನಾವು ಅಭಿಮಾನ ಬೆಳೆಸಿಕೊಳ್ಳದೇ ಕಡೆಗಣಿಸಿದ ಕಾರಣ ಇಂದು ಇವುಗಳನ್ನು ವಿದೇಶದ ಹೆಸರಿನಲ್ಲಿ ಪುನಃ ಭಾರತಕ್ಕೆ ಬಂದು ಪ್ರಚಾರ ಪಡೆಯುತ್ತಿವೆ. ಆಕ್ಯುಪ್ರೆಶರ್ ಚೀನಾದ ವೈದ್ಯಕೀಯ ಪದ್ಧತಿ ಎಂದು ಪ್ರಚಾರವಾಗುತ್ತಿದೆ. ವಾಸ್ತವವಾಗಿ ಇದು ಭಾರತೀಯ ಆಯುರ್ವೇದ ವೈದ್ಯಪದ್ಧತಿ. ಇಂತಹ ಸಂಗತಿಗಳ ಬಗ್ಗೆ ಜನರು ಎಚ್ಚರದಿಂದ ಇರಬೇಕು. ಯೋಗಗುರು ಬಾಬಾ ರಾಮದೇವ್ ಭಾರತವನ್ನು ಸ್ವಾಸ್ಥ್ಯ ಹಾಗೂ ಆಧ್ಯಾತ್ಮಿಕ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವಲ್ಲಿ ನಡೆಸಿರುವ ಅಭಿಯಾನದಲ್ಲಿ ದೇಶದ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಸನ್ಮಾನ: ಭಾರತ್ ಸ್ವಾಭಿಮಾನ್ ಟ್ರಸ್ಟ್ ರಾಜ್ಯ ಪ್ರಭಾರಿ ದಿವ್ಯಜ್ಞಾನಾನಂದ ಸ್ವಾಮೀಜಿ ಯೋಗಾಸನಗಳ ಪ್ರದರ್ಶನ ನೀಡಿ ಅವುಗಳ ಪ್ರಯೋಜನ ತಿಳಿಸಿದರು. ಈ ಸಂದರ್ಭದಲ್ಲಿ ಯೋಗ ಶಿಕ್ಷಕರನ್ನು ಸನ್ಮಾನಿಸಲಾಯಿತು.ಶಿವಮೊಗ್ಗದ ಉಪನ್ಯಾಸಕ ದಿಲೀಪ್ ಕುಮಾರ್ ಪಾಂಡೆ, ಹುತಾತ್ಮ ಸುಖದೇವ್, ಭಗತ್ ಸಿಂಗ್, ರಾಜಗುರು ಅವರುಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನ ಮಾಡಿದ ಮಹತ್ವ ವಿವರಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎಲ್. ದೇವರಾಜ್, ಸತ್ಯಸಾಯಿ ಸೇವಾಸಂಸ್ಥೆ ರಾಜ್ಯ ಸಂಚಾಲಕ ಪ್ರಭಾಕರ್ ಬೀರಯ್ಯ, ಪತಂಜಲಿ ಯೋಗಸವುತಿ ಗೌರವಾಧ್ಯಕ್ಷ ವೆಂಕಟರಮಣ ಶೇಟ್ ಮೊದಲಾದವರು ಉಪಸ್ಥಿತರಿದ್ದರು.