29ರಂದು ಸಂಗಮೇಶ್ವರ್ ಆತ್ಮೀಯರ ಸಭೆ
ಭದ್ರಾವತಿ: ಭದ್ರಾವತಿಯಲ್ಲಿ ತಾವು ಹಲವಾರು ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಇದುವರೆಗೂ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ನಾನು ಯಾವ ಪಕ್ಷಕ್ಕೂ ಹೋಗಿಲ್ಲ. ಇದನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತಿಳಿದುಕೊಳ್ಳಬೇಕಾಗಿದೆ. ಮಾ. 28ರ ಒಳಗಾಗಿ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಮಾ. 29ರ ಬೆಳಗ್ಗೆ 11 ಗಂಟೆಗೆ ವೀರಶೈವ ಸಭಾ ಭವನದಲ್ಲಿ ನಡೆಯಲಿರುವ ಆತ್ಮೀಯರ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏನೇ ಆದರೂ ಕೂಡ ನಾನು ಕಾಂಗ್ರೆಸ್ ಬಿಡುವುದಿಲ್ಲ. ತಮ್ಮ ಸೇವೆ ಪಡೆಯುವಂತೆ ಪಕ್ಷಕ್ಕೆ ಮನವಿ ಮಾಡಿದರು.
29ರ ಸಭೆಗೆ ಅಭಿಮಾನಿಗಳು, ಸ್ತ್ರೀಶಕ್ತಿ ಸಂಘಗಳು, ಸಂಘ ಸಂಸ್ಥೆಗಳು, ಆಟೋ ಚಾಲಕರು, ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರು ಸಭೆಗೆ ಆಗಮಿಸುವಂತೆ ಮನವಿ ಮಾಡಿದರು. ನನಗೆ ಹಲವಾರು ಪಕ್ಷದವರು ಆಹ್ವಾನಿಸಿದರು ಎಂದರು. ಸಿ.ಎಂ. ಇಬ್ರಾಹಿಂ ಮತ್ತು ಸಹೋದರರು ನನ್ನ ಬಗ್ಗೆ ಇಲ್ಲ- ಸಲ್ಲದ ಆರೋಪ ಹೊರಿಸಿ ಹೈಕಮಾಂಡ್‌ಗೆ ದೂರು ಕೊಟ್ಟಿರುತ್ತಾರೆ. ನನ್ನನ್ನು ರಾಜಕೀಯದಿಂದ ತೆಗೆಯಲು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಗುಂಪು ಕೂಡಿಸಿಕೊಂಡು ನನ್ನನ್ನು ತುಳಿಯುತ್ತಿದ್ದಾರೆ. ಪಕ್ಷದಲ್ಲಿನ ನಾಯಕರಿಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸಿ.ಎಂ. ಇಬ್ರಾಹಿಂ ಅಡ್ಡಿಪಡಿಸುತ್ತಿದ್ದಾರೆ ಎಂದರು. ಎಪಿಎಂಸಿ ಮಣಿ, ಮಾಜಿ ನಗರಸಭಾ ಅಧ್ಯಕ್ಷ ಬಿ.ಕೆ. ಮೋಹನ್, ನಗರಸಭಾ ಸದಸ್ಯರಾದ ವೆಂಕಟಯ್ಯ, ಮಹೇಶ್, ನಗರಸಭಾ ಉಪಾಧ್ಯಕ್ಷೆ ಭಾಗ್ಯಮ್ಮ, ಸಕ್ಕುಬಾಯಿ, ಮಾಜಿ ಸದಸ್ಯರಾದ ಚೆನ್ನಪ್ಪ, ರವಿಕುಮಾರ್, ಹೊನ್ನಪ್ಪ, ಬಾಬಾಜಾನ್, ಶ್ಯಾಮ್‌ಕುಮಾರ್, ಹಾಲಪ್ಪ ಮುಂತಾದವರು ಇದ್ದರು.