ಪದಾಧಿಕಾರಿ ಆಯ್ಕೆ
ಶಿವಮೊಗ್ಗ: ಗಾಂಧಿಬಜಾರಿನ ಗಂಗಾ ಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿ ಸಭೆಯಲ್ಲಿ ಎಸ್.ಸಿ. ಲೋಕೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ, ಎಸ್.ಬಿ. ಅಶೋಕ್ಕುಮಾರ (ಕಾರ್ಯದರ್ಶಿ), ಪ್ರೊ.ಸತ್ಯನಾರಾಯಣ (ಉಪಾಧ್ಯಕ್ಷ), ಎಸ್.ಆರ್. ಸುರೇಶ್ (ಕೋಶಾಧ್ಯಕ್ಷ), ಎಸ್.ಜಿ. ಪರಮೇಶ್ವರಪ್ಪ (ಸಹ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಎಸ್.ಎಂ. ಲೋಕೇಶ್, ಎಸ್.ಸಿ.ಅಶೋಕ್ಕುಮಾರ್, ಎಚ್.ಈಶ್ವರಪ್ಪ, ಎಂ.ಮಂಜುನಾಥ, ಎಸ್.ಟಿ.ಹನುಮಂತಪ್ಪ ಆಯ್ಕೆಯಾಗಿದ್ದಾರೆ.
ಬಣ್ಣ- ರಂಗ ಶಿಬಿರ
ಶಿವಮೊಗ್ಗ: ನಗರದ ಬಣ್ಣ- ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಯಿಂದ ಏ.3 ರಿಂದ ಏ.14 ರವರೆಗೆ ವಿನೋಬನಗರ ಸೂಡಾ ಸಂಕೀರ್ಣದ ಸಮೀಪದ ಚೇತನ ಶಾಲೆಯಲ್ಲಿ 'ರಂಗಹಬ್ಬ' ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. 8 ರಿಂದ 16 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ನೀನಾಸಂ, ರಂಗಾಯಣದ ನುರಿತ ಕಲಾವಿದರು ತರಬೇತಿ ನೀಡಲಿದ್ದಾರೆ. ಸಂವಹನ ಕೌಶಲ್ಯ, ಮುಖವಾಡ ತಯಾರಿಕೆ ಸೇರಿದಂತೆ ಹಲವು ಸೃಜನಶೀಲ ಚಟುವಟಿಕೆ ನಡೆಯಲಿದೆ. ಮಾಹಿತಿಗೆ ನಯನ್ ಅರೇಹಳ್ಳಿ (9535830470, 8147 882768) ಅವರನ್ನು ಸಂಪರ್ಕಿಸಿ.
ಅಹವಾಲು ಸ್ವೀಕಾರ
ಶಿವಮೊಗ್ಗ: ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಅಧಿಕಾರಿಗಳು ಮಾರ್ಚ್ ಮಾಹೆಯಲ್ಲಿ ಪ್ರವಾಸಿ ಮಂದಿರಗಳಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಮಾ.27 ರಂದು ಬೆಳಗ್ಗೆ 11 ರಿಂದ 1 ರವರೆಗೆ ಹೊಸನಗರ ಪ್ರವಾಸಿ ಮಂದಿರದಲ್ಲಿ, ಮಧ್ಯಾಹ್ನ 3 ರಿಂದ 5 ಗಂಟೆವರೆಗೆ ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳ ಕುರಿತು ಆಗುತ್ತಿರುವ ಅನಗತ್ಯ ವಿಳಂಬ, ಮತ್ತಿತರ ಸಮಸ್ಯೆಗಳಿದ್ದಲ್ಲಿ ನಿಗದಿತ ದಿನಾಂಕ, ಸಮಯ ಮತ್ತು ಸ್ಥಳಗಳಲ್ಲಿ ಖುದ್ದಾಗಿ ಹಾಜರಿದ್ದು, ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಂ.ಪಿ. ನಾಗರಾಜು ಅವರು ತಿಳಿಸಿದ್ದಾರೆ.