ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿದ್ಯುತ್ ವೈಫಲ್ಯ: ನೀರು ಸರಬರಾಜಿಗೆ ತೊಂದರೆ

Lingaraj Badiger
Updated On : 26 Mar 2014, 11:56 am

ಕ.ಪ್ರ.ವಾರ್ತೆ, ಶಿರಾಳಕೊಪ್ಪ ಪಟ್ಟಣಕ್ಕೆ ಅಂಜನಾಪುರದಿಂದ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ನಿರಂತರ ವಿದ್ಯುತ್ ವೈಫಲ್ಯದಿಂದ ಕುಡಿಯುವ ನೀರು ಸರಬರಾಜು ಮಾಡಲು ತೀವ್ರ ತೊಂದರೆ ಆಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ತಕ್ಷಣ ವ್ಯವಸ್ಥೆ ಸರಿಪಡಿಸುವಂತೆ ಪಪಂ ಸದಸ್ಯ ಎಚ್.ಎಂ. ಚಂದ್ರಶೇಖರ ಆಗ್ರಹಿಸಿದ್ದಾರೆ.
ಬೇಸಿಗೆ ದಿನವಾಗಿರುವದರಿಂದ ಪ್ರತಿಯೊಬ್ಬ  ನಾಗರಿಕರಿಗೂ ನೀರಿನ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭದಲ್ಲಿ  ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಸಂದರ್ಭದಲ್ಲಿ ಪದೇಪದೇ ವಿದ್ಯುತ್ ಸಮಸ್ಯೆ ಉಂಟಾದರೆ ನೀರು ಬರುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಸಮಸ್ಯೆಗೆ ಪರಿಹಾರ ಹೇಗೆ: ಶಿಕಾರಿಪುರ ಮತ್ತು ಶಿರಾಳಕೊಪ್ಪ ಪಟ್ಟಣದ ನಾಗರಿಕರಿಗೆ ನಿರಂತರ ಕುಡಿಯುವ ನೀರು ದೊರಕಲಿ ಎಂದು ಈ ಹಿಂದೆ ಸರ್ಕಾರ ಕುಮದ್ವತಿ ನದಿಯಿಂದ ನೀರು ಪೂರೈಸುವ ಯೋಜನೆ ಮಾಡಿದೆ. ಆದರೆ ನದಿಯಿಂದ ಶಿರಾಳಕೊಪ್ಪ ಪಟ್ಟಣಕ್ಕೆ ನೀರು ಬರಲು ಅಂಜನಾಪುರ, ಶಿಕಾರಿಪುರ ಮತ್ತು ಶಿರಾಳಕೊಪ್ಪ ಮೂರು ಕಡೆಯೂ ವಿದ್ಯುತ್ ಸರಬರಾಜು  ಇರಬೇಕಾಗುತ್ತದೆ ಎಂದರು.
ಆದರೆ ಅಂಜನಾಪುರದಿಂದ ನೀರು ಬಿಡುವ ವೇಳೆಗೆ ಅಂಜನಾಪುರ, ಶಿಕಾರಿಪುರ, ಶಿರಾಳಕೊಪ್ಪ ಮೂರು ಕಡೆಯಲ್ಲಿ ಒಂದಲ್ಲಾ ಒಂದು ಕಡೆ  ವಿದ್ಯುತ್ ಇಲ್ಲದಿದ್ದರೂ, ನೀರು ಪೂರೈಸಲು ಆಗುವುದಿಲ್ಲ. ಈಗ ಪ್ರತಿ ದಿನ ಒಂದಲ್ಲ ಒಂದು ಕಡೆ ವಿದ್ಯುತ್ ವೈಫಲ್ಯ ಕಾಣುತ್ತಿರುವುದರಿಂದ ಸಾಕಷ್ಟು ನೀರು ಬಾರದೇ ಶಿರಾಳಕೊಪ್ಪ ಪಟ್ಟಣಕ್ಕೆ ಶೇ.30ರಷ್ಟು ಮಾತ್ರ ದೊರಕುತ್ತಿದೆ.
ಈ ವ್ಯವಸ್ಥೆ ಸರಿಯಾಗಬೇಕಾದರೆ ವಿದ್ಯುತ್ ಇಲಾಖೆ ನೀರು ಸರಬರಾಜು ಆಗುವ ಮೂರು ಕಡೆ ನಿಲುಗಡೆ ಆಗದಂತೆ ವ್ಯವಸ್ಥೆ ಕಲ್ಪಿಸಿದಾಗ ಮಾತ್ರ ನಾಗರಿಕರಿಗೆ ನೀರು ದೊರಕುತ್ತದೆ ಎನ್ನಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಗಮನ ಹರಿಸಿದರೆ ಮಾತ್ರ ಪರಿಹಾರ ಸಿಗಲು ಸಾಧ್ಯ ಎಂದಿದ್ದಾರೆ
ಸಾಕಷ್ಟು ನೀರು ಇದೆ: ಶಿಕಾರಿಪುರ- ಶಿರಾಳಕೊಪ್ಪ ಪಟ್ಟಣಕ್ಕೆ ನೀರು ಸರಬರಾಜು ಆಗುವ ಶಿಕಾರಿಪುರ ತಾಲೂಕಿನ ಜೀವನದಿ ಕುಮದ್ವತಿಯಲ್ಲಿ ಸಾಕಷ್ಟು ನೀರು ಶೇಖರಣೆ ಇದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ  ಆಗದಿರಲೆಂದು ಈ ಬಾರಿ ಮುನ್ನೆಚ್ಚರಿಕೆ ವಹಿಸಿ, ಸಾಕಷ್ಟು ನೀರು ಸಂಗ್ರಹಿಸಿಡಲಾಗಿದೆ. ಆದರೆ ವಿದ್ಯುತ್ ಸರಬರಾಜು ಮೂರೂ ಕಡೆ ಬೇರೆಬೇರೆ ಸಂದರ್ಭದಲ್ಲಿ ನಿಲುಗಡೆ ಆಗುತ್ತಿರುವುದರಿಂದ ಸಮಸ್ಯೆ ಆಗಿದೆಯೇ ವಿನಃ ಬೇರೆ ಸಮಸ್ಯೆ ಏನೂ ಇಲ್ಲ ಎಂದು ಚಂದ್ರಶೇಖರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement