ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕುರಿ ಸಂವರ್ಧನಾ ಕೇಂದ್ರ ಬಾಗಲಕೋಟೆಗೆ

Lingaraj Badiger
Updated On : 27 Mar 2014, 12:25 pm

ನಾಯಕನಹಟ್ಟಿ: ಸಮೀಪದ ಕುದಾಪುರ ಕುರಿ ಸಂವರ್ಧನಾ ಕೇಂದ್ರವನ್ನು ಅಧಿಕಾರಿ ಮತ್ತು ಸಿಬ್ಬಂದಿ ಸಹಿತ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಕುರಿ ಸಂವರ್ಧನಾ ಕೇಂದ್ರಕ್ಕೆ ವರ್ಗಾಯಿಸುವಂತೆ ರಾಜ್ಯ ಸರ್ಕಾರ  ಜ. 28 ರಂದು ಆದೇಶ ಹೊರಡಿಸಿದ್ದು, ಇಲ್ಲಿನ ಕುರಿ ಸಾಕಾಣೆಗಾರರಿಗೆ ತೊಂದರೆ ಉಂಟಾಗಲಿದೆ.
ಈ ಪ್ರದೇಶದಲ್ಲಿ ಸುಮಾರು 500 ನಾನಾ ತಳಿಯ ಕುರಿಗಳಿದ್ದು, ಇಲ್ಲಿ ಕುರಿ ಸಾಕಾಣಿಕೆ ಹಾಗೂ ಮೂಲ  ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಈ ಕೇಂದ್ರವನ್ನು ವರ್ಗಾಯಿಸುತ್ತಿರುವುದರಿಂದ ಜಿಲ್ಲೆಯಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಜಿಲ್ಲೆ ಕುರಿ ಸಾಕಾಣಿಕೆಯಲ್ಲಿ ರಾಜ್ಯದಲ್ಲಿಯೇ 2 ನೇ ಸ್ಥಾನ ಹೊಂದಿದ್ದು, ಕುದಾಪುರ ಹಾಗೂ ವರುವು ಕಾವಲಿನಲ್ಲಿ ಮ್ಯಾಸ ನಾಯಕರು ಹಾಗೂ ಕಾಡುಗೊಲ್ಲರ ಪ್ರಮುಖ ಉದ್ಯೋಗ ಕುರಿ ಸಾಕಾಣಿಕೆ ಆಗಿದೆ.
ಭೂಮಿ ಪರಭಾರೆ: ಈಗಾಗಲೇ ವರುವು ಮತ್ತು ಕುದಾಪುರ ಕಾವಲಿನಲ್ಲಿ ವಿವಿಧ ವಿಜ್ಞಾನ ಸಂಸ್ಥೆಗಳಿಗೆ ಭೂಮಿ  ಪರಭಾರೆ ಮಾಡಿದ್ದು, ಕುರಿ ಸಾಕಾಣಿಕೆ ಕ್ಷೇತ್ರದಲ್ಲಿ ಕುರಿ ಸಾಕಣೆ ಮಾಡಲು ಕಷ್ಟವಾಗುತ್ತಿದೆ. ಈ ಪ್ರದೇಶವನ್ನು ಇಲ್ಲಿಯೇ ಉಳಿಸಿ ಸುತ್ತಮುತ್ತಲಿನ ಸಾಕಣೆಗಾರರ ವೃತ್ತಿಯನ್ನು ಕಾಪಾಡಲು ನೆರವಾಗಬೇಕಾಗಿದೆ.
ಈ ಸಂಬಂಧ ಕುರಿ ಸಂವರ್ಧನಾ ಉಪನಿರ್ದೇಶಕ ಡಾ.ಬಿ. ತಿಪ್ಪೇಸ್ವಾಮಿ ಮಾತನಾಡಿ, ಈಗಾಗಲೇ ಸರ್ಕಾರ  ಈ ಕೇಂದ್ರವನ್ನು ಬಾಗಲಕೋಟೆಗೆ ಸ್ಥಳಾಂತರಿಸಲು ಆದೇಶ ಬಂದಿದ್ದು, ಇಲಾಖೆಯ ಮುಖ್ಯಾಧಿಕಾರಿಗಳು ಈ ಪ್ರದೇಶಕ್ಕೆ ಆಗಮಿಸಲಿದ್ದಾರೆ ಎಂದರು.
ಇಲ್ಲಿನ ಸ್ಥಿತಿಗತಿ ಬಗ್ಗೆ ಮನವರಿಕೆ ಮಾಡಲಾಗುವುದು. ಈ ಕ್ಷೇತ್ರವನ್ನು ಇಲ್ಲಿಯೇ ಮುಂದುವರೆಸಿ ಬೇರೆ ಕಡೆ ಸ್ಥಳಾಂತರಗೊಂಡರೆ ಈ ಪ್ರದೇಶದಲ್ಲಿ ಮತ್ತೊಮ್ಮೆ ಇಂತಹ ಸಂಸ್ಥೆ ಪ್ರಾರಂಭಿಸಲು ಸಾಧ್ಯವಿಲ್ಲ. ಆದ್ದರಿಂದ ವ್ಯವಸ್ಥಾಪಕ ಮಂಡಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಅಮೃತ್ ಮಹಲ್ ಹೋರಾಟ ಸಮಿತಿ ಅಧ್ಯಕ್ಷ ದೊಡ್ಡ ಉಳ್ಳಾರ್ತಿ ಕರಿಯಣ್ಣ ಮಾತನಾಡಿ, ಈಗಾಗಲೇ ಕುರಿ ಸಂವರ್ಧನಾ ಕೇಂದ್ರ ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಹಾಗೂ ಕಾನೂನು ಮತ್ತು ಪಶು ಸಂಗೋಪನಾ ಸಚಿವರಿಗೆ ಈ ಕ್ಷೇತ್ರವನ್ನು ಇಲ್ಲಿಯೇ ಮುಂದುವರಿಸಿಕೊಂಡು ಹೋಗಲು ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಈ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದ ವಿವಿಧ ತಳಿಯ ಕುರಿಗಳನ್ನು ಸಾಕುವುದರ ಮೂಲಕ ಇಲ್ಲಿಯೇ ಕುರಿ ಉತ್ಪನ್ನ ವೃದ್ಧಿಸಿ ಇಲ್ಲಿನ ಜನರಿಗೆ ಸಹಾಯವಾಗುವಂತೆ ಮಾಡಬೇಕು  ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement