ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ: ತಮಿಳು ಇರುಳರ್ ಹಾಗೂ ಭೋವಿ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರ ನಿರಾಕರಿಸುತ್ತಿರುವುದನ್ನು ಖಂಡಿಸಿ ತಮಿಳ್ ಇರುಳರ್ ಜಾತಿ ಪ್ರಮಾಣ ಪತ್ರ ಹೋರಾಟ ಸಮಿತಿಯು ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸೈನ್ಸ್ ಮೈದಾನದಿಂದ ಆರಂಭವಾದ ಪ್ರತಿಭಟನಾ ರ್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನತಂರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಜಾತಿ ಪ್ರಮಾಣ ಪತ್ರ: ಈ ಹಿಂದೆ ತಮಿಳು ಇರುಳರ್ ಹಾಗೂ ಭೋವಿ ಜಾತಿಗೆ ಸೇರಿದವರಿಗೂ ಕೂಡ ಪ್ರಮಾಣ ಪತ್ರ ನಿರಾಕರಣೆ ಮಾಡಲಾಗುತ್ತಿದೆ. ಅಧಿಕಾರಿಗಳ ಈ ಕ್ರಮದಿಂದ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಶಿಕ್ಷಣ, ಉದ್ಯೋಗ ಮತ್ತಿತರ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ. ಜಾತಿ ಪ್ರಮಾಣ ಪತ್ರ ಇಲ್ಲದ ಕಾರಣ ಮಕ್ಕಳನ್ನು ಶಾಲೆಗೆ ಸೇರಿಸಲು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಅಧಿಸೂಚನೆಯಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಇರುಳರ್ ಜಾತಿಯನ್ನು ಕೂಡ ಸೂಚಿಸಲಾಗಿದೆ. ನಮ್ಮ ಪೂರ್ವಜರು 60 ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಇಲ್ಲಿಯೇ ವಾಸವಾಗಿದ್ದು, ಖಾಯಂ ನಿವಾಸಿಗಳಾಗಿದ್ದೇವೆ. ಆದರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕಾದರೆ ತಮಿಳುನಾಡಿನಿಂದ ವಲಸೆ ಪ್ರಮಾಣ ಪತ್ರ ತರುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಇದು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯ ಸರ್ಕಾರವು ತಮಿಳು ಇರುಳರ್ ಹಾಗೂ ಭೋವಿ ಜನಾಂಗಂದವರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಸಂಘಟನೆಯ ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಎಸ್.ಬಿ. ಶಿವಶಕರ್, ಖಜಾಂಚಿ ಎಂ. ವೇಲು, ಹೇಮಂತಕುಮಾರ್, ದಯಾನಂದ, ಸುರೇಶ್, ಮಂಜುನಾಥ್, ನಾಗಪ್ಪ ಸೇರಿದಂತೆ ಹಲವರು ಇದ್ದರು.